ಕೆ.ಆರ್ ಪುರ: ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಶಾಸಕ ಬೈರತಿ ಬಸವರಾಜ್ ಭೇಟಿ ನೀಡಿ ಎಲ್ಲಾ ವಾರ್ಡ್ ನ ರೋಗಿಗಳ ಸಮಸ್ಯೆ ಆಲಿಸಿ, ಆಸ್ಪತ್ರೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಬಡವರು ಹೆಚ್ಚಾಗಿ ಬರುವ ಸರ್ಕಾರಿ ಆಸ್ಪತ್ರೆಯ ಸ್ಥಿತಿಗತಿ ತಿಳಿಯಲು ಖುದ್ದಾಗಿ ಭೇಟಿ ಕೊಟ್ಟಿದ್ದೇನೆ. ಈ ಆಸ್ಪತ್ರೆಯಲ್ಲಿ ಜನರ ಆರೋಗ್ಯ ಸುಧಾರಿಸಲು ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಬೇಕಿದೆ. ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಮಾಡಿಸಬೇಕು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ಹಾಗೆ ಕೆ.ಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಮತ್ತು ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಹೇಳಿದರು.

100 ಹಾಸಿಗೆಯ ಆಸ್ಪತ್ರೆ ಸಿದ್ಧವಾಗಿ ವರ್ಷಗಳೇ ಕಳೆದರೂ ಜನರ ಉಪಯೋಗಕ್ಕೆ ಬಾರದೇ ಇರುವುದು ಮಾತ್ರ ದುರಾದೃಷ್ಟಕರ ವಿಷಯ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಮಾಜಿ ನಗರಸಭೆ ಸದಸ್ಯ ಕೇಶವ, ವಾರ್ಡ್ ಅಧ್ಯಕ್ಷ ಶಿವಪ್ಪ ಮುಖಂಡರಾದ ,ಕೆ.ಪಿ ಕೃಷ್ಣ, ರಾಜುಸಿಂಗ್,ಆಸ್ಪತ್ರೆಯ ವೈದ್ಯರು ಮತ್ತಿತರರಿದ್ದರು.