Saturday, July 11, 2026
Home ಅಪರಾಧ ಸುದ್ದಿಅನುಮಾನದ ಹುತ್ತಕ್ಕೆ ಮತ್ತೊಂದು ಬಲಿ : ಲಿವ್-ಇನ್ ಪಾರ್ಟ್‌ನರ್‌ನಿಂದ ಯುವತಿಯ ಬರ್ಬರ ಕೊ*ಲೆ.

ಅನುಮಾನದ ಹುತ್ತಕ್ಕೆ ಮತ್ತೊಂದು ಬಲಿ : ಲಿವ್-ಇನ್ ಪಾರ್ಟ್‌ನರ್‌ನಿಂದ ಯುವತಿಯ ಬರ್ಬರ ಕೊ*ಲೆ.

by Dharmaraju
0 comments

ಬೆಂಗಳೂರು: ರಾಜಧಾನಿಯ ಐಟಿ ಹಬ್ ವಲಯದಲ್ಲಿ ಮತ್ತೊಂದು ಭೀಕರ ಕೊ# ಪ್ರಕರಣ ಬೆಳಕಿಗೆ ಬಂದಿದೆ. ಪ್ರೇಯಸಿಯ ನಡತೆಯ ಮೇಲೆ ಅನುಮಾನಗೊಂಡ ಪ್ರಿಯಕರ ಆಕೆಯನ್ನು ಚಾಕುವಿನಿಂದ ಇರಿದು, ಗಂಟಲು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

ಸಿಕ್ಕಿಂ ಮೂಲದ 22 ವರ್ಷದ ಅತಿ ಹಂಗ್ಮಾ ಕೊಲೆಯಾದ ದುರ್ದೈವಿ. ಈಕೆ ನಗರದ ಖಾಸಗಿ ಸಲೂನ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಪುರ್ಬಾ ಲೆಪ್ಚಾ ಎಂಬಾತನೇ ಕೊಲೆಗಡುಕ ಪ್ರಿಯಕರನಾಗಿದ್ದು, ಈತ ಖಾಸಗಿ ಹೋಟೆಲ್ ಒಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದನು.

ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು ಜೋಡಿ
ಪರಸ್ಪರ ಪ್ರೀತಿಸುತ್ತಿದ್ದ ಅತಿ ಹಂಗ್ಮಾ ಮತ್ತು ಪುರ್ಬಾ ಲೆಪ್ಚಾ ಕಳೆದ ಒಂದು ತಿಂಗಳಿನಿಂದ ಬೆಳ್ಳಂದೂರು ಸಮೀಪದ ದೊಡ್ಡಕನ್ನಹಳ್ಳಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು, ಒಟ್ಟಿಗೆ ವಾಸಿಸುತ್ತಿದ್ದರು (ಲಿವ್-ಇನ್ ರಿಲೇಷನ್‌ಶಿಪ್). ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಷ್ಟರಲ್ಲಿ ಇಬ್ಬರ ನಡುವೆ ಮೂರನೇ ವ್ಯಕ್ತಿಯ ಪ್ರವೇಶವಾಗಿದೆ.

ಸ್ನೇಹಿತನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಮೃತ ಯುವತಿಗೆ ಇನ್ನೊಬ್ಬ ಯುವಕನೊಂದಿಗೆ ಇದ್ದ ಸ್ನೇಹವೇ ಈ ಕೊಲೆಗೆ ಮುಖ್ಯ ಕಾರಣ ಎನ್ನಲಾಗಿದೆ. ಈ ವಿಚಾರವಾಗಿ ನಿನ್ನೆ ಬೆಳಿಗ್ಗೆಯಿಂದಲೇ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ರಾತ್ರಿಯಾದರೂ ಜಗಳ ಶಮನವಾಗದೆ ವಿಕೋಪಕ್ಕೆ ತಿರುಗಿದೆ. ಇದರಿಂದ ತೀವ್ರ ಕೋಪೋದ್ರಿಕ್ತನಾದ ಪುರ್ಬಾ ಲೆಪ್ಚಾ, ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಅತಿ ಹಂಗ್ಮಾ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ತದನಂತರ ಆಕೆಯ ಗಂಟಲು ಕೊಯ್ದು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ಳಂದೂರು ಪೊಲೀಸರು ತಡರಾತ್ರಿಯೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಪುರ್ಬಾ ಲೆಪ್ಚಾನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಮಾಲಿನ್ಯ ರಹಿತವಾಗಿದ್ದ ಪ್ರೇಮದ ಗೂಡಿನಲ್ಲಿ ಅನುಮಾನದ ಹುತ್ತ ಬೆಳೆದು, ಕೊನೆಯಲ್ಲಿ ಯುವತಿಯ ಜೀವವನ್ನೇ ಬಲಿಪಡೆದಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ

You may also like

Leave a Comment