Saturday, July 11, 2026
Home ರಾಜಕೀಯ ‌ಸುದ್ದಿಬಿಜೆಪಿ ಪಕ್ಷ ನಮ್ಮ ತಾಯಿಯಿದ್ದಂತೆ, ಪಕ್ಷಕ್ಕೆ ದ್ರೋಹ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ:ಬೈರತಿ ಬಸವರಾಜ್

ಬಿಜೆಪಿ ಪಕ್ಷ ನಮ್ಮ ತಾಯಿಯಿದ್ದಂತೆ, ಪಕ್ಷಕ್ಕೆ ದ್ರೋಹ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ:ಬೈರತಿ ಬಸವರಾಜ್

by Dharmaraju
0 comments

ಕೆ.ಆರ್ ಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪಗಳನ್ನು ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ತಳ್ಳಿಹಾಕಿದ್ದು, ತಾನು ಪಕ್ಷದ ಆದೇಶದಂತೆ ಅಧಿಕೃತ ಅಭ್ಯರ್ಥಿಗೆ ಮತದಾನ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಆರ್ ಪುರಂನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೀವನದಲ್ಲಿ ಯಾವ ಪಕ್ಷದಲ್ಲಿರುತ್ತೇನೋ ಆ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿದ್ದು ಬೈರತಿ ಬಸವರಾಜ್ ಅವರ ಹೆಸರು ಮಾದ್ಯಮದಲ್ಲಿ ಬಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಯಾವುದೇ ಸಂಪೂರ್ಣ ಮಾಹಿತಿ ಇಲ್ಲದೇ ತಮ್ಮ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಬಿಜೆಪಿ ಪಕ್ಷ ನಮ್ಮ ತಾಯಿಯಿದ್ದಂತೆ. ಅಂತಹ ಪಕ್ಷಕ್ಕೆ ದ್ರೋಹ ಮಾಡುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು.

ನನ್ನ ಹೆಸರಿಗೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಕೆಲ ಕಾಣದ ಕೈಗಳು ಕೆಲಸ ಮಾಡುತ್ತಿವೆ. ನಾನು ಯಾವುದೇ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಸೂಚನೆಯಂತೆ ಮತದಾನ ಮಾಡಿದ್ದೇನೆ ಎಂದು ಹೇಳಿದರು.

ಕಾಯ, ವಾಚ, ಮನಸಾ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಅಡ್ಡ ಮತದಾನ ಮಾಡಿದ್ದೇನೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ, ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ನಾನು ಅಡ್ಡ ಮತದಾನ ಮಾಡಿದ್ದೇನೆ ಎಂದು ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ಮಾನಹಾನಿ ಮೊಕದ್ದಮೆ (ಡಿಫಮೇಷನ್ ಕೇಸ್) ದಾಖಲಿಸುತ್ತೇನೆ ಎಂದರು.

ಇನ್ನೂ ಆ ದಿನ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ನನ್ನನ್ನು ಕರೆದಿದ್ದರು. ಆದರೆ ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಯಾವುದೇ ಸಭೆಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆ ಎಂದು ಹೇಳಿದರು.

ನಾನು ಯಾರಿಗೂ ಹೆದರಿ ಅಥವಾ ಒತ್ತಡಕ್ಕೆ ಮಣಿದು ಮತದಾನ ಮಾಡಿಲ್ಲ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ಪಕ್ಷದ ಪರವಾಗಿ ಮತದಾನ ಮಾಡಿದ್ದೇನೆ ಎಂದು ಬೈರತಿ ಬಸವರಾಜ್ ಪುನರುಚ್ಚರಿಸಿದರು.

You may also like

Leave a Comment