ತುಮಕೂರು: ಹೊಸ ಬೈಕ್ ಖರೀದಿಸಿದ ಸಂತಸ ಕೇವಲ ಒಂದು ದಿನಕ್ಕೂ ಉಳಿಯಲಿಲ್ಲ. ಬೈಕ್ ಖರೀದಿಸಿದ ಮರುದಿನವೇ ಸಂಭವಿಸಿದ ಭೀಕರ ಅಪಘಾತದಲ್ಲಿ 19 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ನಡೆದಿದೆ.
ಮೃತನನ್ನು ಪಾವಗಡ ತಾಲೂಕಿನ ದೊಡ್ಡಹಳ್ಳಿ ನಿವಾಸಿ ನಂದೀಶ್ ಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆಯಷ್ಟೇ ಹೊಸ ಬೈಕ್ ಖರೀದಿಸಿದ್ದ ನಂದೀಶ್, ಸ್ನೇಹಿತನೊಂದಿಗೆ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ನಂದೀಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ಸಂಬಂಧ ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದೇ ವೇಳೆ ಧಾರವಾಡ ಜಿಲ್ಲೆಯಲ್ಲೂ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ನಡೆದ ಈ ಅಪಘಾತದಲ್ಲಿ ಹಳೇ ತೇಗೂರು ನಿವಾಸಿ ಷಣ್ಮುಖ ಜೋಗಿ (28) ಹಾಗೂ ಉತ್ತರ ಪ್ರದೇಶ ಮೂಲದ ಸಾಗರ್ (30) ಮೃತಪಟ್ಟಿದ್ದಾರೆ.
ಟೈರ್ ಬ್ಲಾಸ್ಟ್ ಆಗಿದ್ದ ಕಾರಣ ಲಾರಿ ಚಾಲಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೈರ್ ಬದಲಿಸುತ್ತಿದ್ದ ವೇಳೆ, ಅದೇ ಮಾರ್ಗದಲ್ಲಿ ಬಂದ ಕ್ಯಾಂಟರ್ ನಿಯಂತ್ರಣ ತಪ್ಪಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಮಾಹಿತಿ ತಿಳಿದ ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.