ಮಹದೇವಪುರ: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ನಾಲ್ಕು ಗೋಪುರಗಳ ಪರಿಧಿಯಿಂದ ಹೊರಗೂ ಇಂದು ಬೆಂಗಳೂರು ನಗರ ವಿಸ್ತರಿಸಿದೆ. ಅವರ ದೂರದೃಷ್ಟಿ, ಅಭಿವೃದ್ಧಿ ಪರಿಕಲ್ಪನೆ ಮತ್ತು ಆದರ್ಶಗಳನ್ನು ಅನುಸರಿಸಿಕೊಂಡೇ ಮಹದೇವಪುರ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಕ್ಷೇತ್ರದ ಹೂಡಿ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಯ ಎರಡು ಮಂಡಲಗಳ ವತಿಯಿಂದ ಆಯೋಜಿಸಿದ್ದ ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರೊಂದಿಗೆ ಭಾಗವಹಿಸಿ, ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಶಿಕ್ಷಣ, ಹೋರಾಟ ಮತ್ತು ಅಭಿವೃದ್ಧಿಗೆ ಮತ್ತೊಂದು ಹೆಸರೇ ನಾಡಪ್ರಭು ಕೆಂಪೇಗೌಡರು. ಬೆಂಗಳೂರಿನ ಅಭಿವೃದ್ಧಿಯ ಜೊತೆಗೆ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಕೆರೆಗಳನ್ನು ನಿರ್ಮಿಸಿದ ಅವರ ದೂರದೃಷ್ಟಿ ಇಂದಿಗೂ ಎಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, “ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಆಡಳಿತ ಕೌಶಲ್ಯ ಹಾಗೂ ಜನಪರ ಚಿಂತನೆಗಳು ಇಂದಿಗೂ ಪ್ರತಿಯೊಬ್ಬ ಜನಪ್ರತಿನಿಧಿಗೂ ಮಾರ್ಗದರ್ಶಕವಾಗಿವೆ. ಕೇವಲ ವ್ಯಾಪಾರ ಮತ್ತು ನಗರಾಭಿವೃದ್ಧಿಗೆ ಮಾತ್ರವಲ್ಲದೆ, ಪರಿಸರ ಸಂರಕ್ಷಣೆಗೂ ಮಹತ್ವ ನೀಡಿ, ನಗರದ ನೀರಿನ ಅಗತ್ಯವನ್ನು ಪೂರೈಸಲು ಬೃಹತ್ ಕೆರೆಗಳನ್ನು ನಿರ್ಮಿಸಿದ್ದರು. ಅವರ ದೂರದೃಷ್ಟಿಯೇ ಇಂದಿನ ಬೆಂಗಳೂರಿನ ಬೆಳವಣಿಗೆಗೆ ಭದ್ರ ಅಡಿಪಾಯವಾಗಿದೆ” ಎಂದು ತಿಳಿಸಿದರು.
“ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ, ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.”
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಮಾಜಿ ಅಧ್ಯಕ್ಷರಾದ ಮನೋಹರ್ ರೆಡ್ಡಿ ಹಾಗೂ ಪಾಪಣ್ಣ, ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್, ಮುಖಂಡರಾದ ಮಹೇಂದ್ರ ಮೋದಿ,ವರ್ತೂರು ಶ್ರೀಧರ್,ಬಿ.ಜಿ.ರಾಜೇಶ್,ಜೋತಿಪುರ ವೇಣು, ಕೆ.ಎಂ. ಎಂ.ಮಂಜುನಾಥ್, ಕಣ್ಣೂರು ಅಶೋಕ್, ಗುಂಜೂರು ಚರಣ್, ಸಿದ್ದಾಪುರ ಹನುಮಂತೇಗೌಡ, ಕೆ.ವಿ.ನಾಗರಾಜ್ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.