Saturday, August 8, 2026
Home ಬೆಂಗಳೂರು ನಗರಕೋಟಿ ಕೋಟಿ ಅನುದಾನ ಎಲ್ಲಿ..? ಆರು ವರ್ಷ ಕಳೆದರೂ ಪೂರ್ಣಗೊಳ್ಳದ ಬಸವನಪುರ ಉದ್ಯಾನವನ

ಕೋಟಿ ಕೋಟಿ ಅನುದಾನ ಎಲ್ಲಿ..? ಆರು ವರ್ಷ ಕಳೆದರೂ ಪೂರ್ಣಗೊಳ್ಳದ ಬಸವನಪುರ ಉದ್ಯಾನವನ

ಕುಡುಕರ ಅಡ್ಡ, ಅನೈತಿಕ ಚಟುವಟಿಕೆ,ವಾಹನಗಳ ಪಾರ್ಕಿಂಗ್ ಆದ ಪಾರ್ಕ್.

by Dharmaraju
0 comments

ಕೆ ಆರ್ ಪುರ: ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್ ನ ಬಸವನಪುರ ಗ್ರಾಮದ ಉದ್ಯಾನವನದ ದುಸ್ಥಿತಿ ಹೇಳತೀರದಾಗಿದೆ. ಸುಮಾರು 4 ನಾಲ್ಕು ಎಕರೆ ಪ್ರದೇಶದಲ್ಲಿ 6 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಕೇವಲ ವಿದ್ಯುತ್ ಕಂಬಗಳು, ಒಂದು ಕಡೆ ಕಾಂಪೌಂಡ್ ಗೋಡೆ , ಹಾಗೂ ವಾಕಿಂಗ್ ಟ್ರ್ಯಾಕ್ ಬಿಟ್ಟು ಬೇರೆನೂ ನಿರ್ಮಾಣವಾಗಿಲ್ಲ.

ಇಪ್ಪತ್ತು ವರ್ಷಗಳ ಹಿಂದೆ ಈ ಜಾಗದಲ್ಲಿ ಬೃಹತ್ ಕಲ್ಲುಕ್ವಾರಿ ಇತ್ತು, ಅದನ್ನು ಸಂಪೂರ್ಣವಾಗಿ ಮುಚ್ಚಿ ಉದ್ಯಾನವನ ನಿರ್ಮಾಣಕ್ಕೆ ಅಂದಿನ ಶಾಸಕ ನಂದೀಶರೆಡ್ಡಿ ಅಡಿಗಲ್ಲು ಹಾಕಿದ್ದರು, ತದನಂತರ ಈಗಿನ ಶಾಸಕ ಬಿ.ಎ.ಬಸವರಾಜ ಆಡಳಿತದಲ್ಲಿ ಎರಡು ಬಾರಿ ಅನುದಾನ ದೊರೆತರೂ ಅಭಿವೃದ್ದಿ ಮಾತ್ರ ಆಗಲಿಲ್ಲ, ಕೋಟಿಗಟ್ಟಲೆ ಅನುದಾನ ಕಾಗದದ ಮೇಲೆ ಮಾತ್ರ ಉಳಿದು, ವಾಸ್ತವದಲ್ಲಿ ಉದ್ಯಾನವು ದುಃಸ್ಥಿತಿಯಲ್ಲಿದೆ, ಅಭಿವೃದ್ಧಿ ಹೆಸರಲ್ಲಿ ಬಿಡುಗಡೆಯಾದ ಕೋಟಿ ರೂಪಾಯಿ ಹಣ ಸಾರ್ವಜನಿಕರಿಗೆ ತಲುಪುತ್ತಿಲ್ಲ. ಯಾವುದೇ ಅಭಿವೃದ್ದಿ ಮಾಡದೇ ಆರು ವರ್ಷಗಳೆ ಕಳೆದಿದ್ದು .ಕೋಟಿ ಕೋಟಿ ಹಣ ಗುಳುಂ ಆಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈಗ ಉದ್ಯಾನದ ಸ್ಥಿತಿ ಅನೈತಿಕ ಚಟುವಟಿಕೆಗಳ ತಾಣ, ಅನಧಿಕೃತ ವಾಹನಗಳ ಪಾರ್ಕಿಂಗ್, ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ, ಉದ್ಯಾನದ ಒಳಗಡೆ ಮತ್ತು ಸುತ್ತಮುತ್ತ ಕಸ ಎಸೆಯುತ್ತಿದ್ದರೂ ಸ್ವಚ್ಛತೆ ಮಾಡುತ್ತಿಲ್ಲ, ಸಾಲದ್ದಕ್ಕೆ ಕಿಡಿಗೇಡಿಗಳು ಕಸಕ್ಕೆ ಬೆಂಕಿಇಟ್ಟು ಸುತ್ತಮುತ್ತ ವಾತಾವರಣವನ್ನು ಹಾಳು ಗೆಡವಿದ್ದಾರೆ. ಹಾಕಿರುವ ವಿದ್ಯುತ್ ಕಂಬಗಳು ಹಾನಿಯಾಗಿದೆ. ಪಾರ್ಕ್ ನಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸಿ ವಾಕಿಂಗ್ ಟ್ರ್ಯಾಕ್ ಗಳು ಅಲ್ಲಲ್ಲಿ ಹಾಳಾಗಿದ್ದು, ಅರೆಬರೆ ಕಾಮಗಾರಿ ಆಗಿದೆ.

ಸ್ಥಳಿಯ ನಿವಾಸಿಗಳ ವಾಹನ ನಿಲುಗಡೆಗೆ ಸೀಮಿತವಾದ ಉದ್ಯಾನವನ:

ಗ್ರಾಮದ ನಿವಾಸಿಗಳ ಕಾರು ಮತ್ತು ಲಾರಿಗಳಿಗೆ ಪಾರ್ಕಿಂಗ್ ಸ್ಥಳಗಳಾಗಿ ಉದ್ಯಾನವನವು ಮಾರ್ಪಟ್ಟಿದೆ. ವಿಪರ್ಯಾಸವೆಂದರೆ ಲಾರಿ ಮಾಲಿಕರು ಉದ್ಯಾನವನವನ್ನ ಕಲ್ಲು ಅನ್ ಲೋಡ್ ಮಾಡುವ ಸ್ಥಳಗಳಾಗಿ ಬದಲಾಯಿಸಿ ಕೊಂಡಿದ್ದಾರೆ.ಈ ಅಕ್ರಮಗಳನ್ನ ಯಾವೊಬ್ಬ ಜನಪ್ರತಿನಿಧಿಗಳಾಗಲೀ… ಅಧಿಕಾರಿಗಳಾಗಲೀ ಇವರ ದರ್ಬಾರನ್ನ ಕೇಳುವವರಿಲ್ಲದಾಗಿದೆ.

ಗುತ್ತಿಗೆದಾರರು ಮತ್ತು ಸ್ಥಳೀಯ ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದೆ. ಕಾಮಗಾರಿ ಮುಗಿದಿದೆ ಎಂದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆಯೇ ಹಣ ಬಿಡುಗಡೆ ಮಾಡುತ್ತಾರೆ ಇದರಿಂದ ನಿವಾಸಿಗಳಿಗೆ ಸಿಗಬೇಕಾದ ಹಸಿರು ವಲಯ ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿದೆ.

ವಿಶಾಲವಾದ ಉದ್ಯಾನವನವನ್ನ ಅಭಿವೃದ್ಧಿ ಮಾಡಲು ದಶಕಗಳೆ ಕಳೆದಿವೆ ಆದರೆ ಸಂಪೂರ್ಣ ಕೆಲಸ ಮಾತ್ರ ಮುಗಿದಿಲ್ಲ. ಉತ್ತಮ ಪಾರ್ಕ್ ನಿಂದ ಸ್ಥಳೀಯರ ವಾಯು ವಿಹಾರ, ಮಕ್ಕಳ ಆಟೋಟಕ್ಕೆ ಅನುಕೂಲ ಆಗಲಿದೆ. ಏನನ್ನೂ ಮಾಡದಿರುವುದರಿಂದ ಉದ್ಯಾನ ಪಾಳು ಬಿದ್ದಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.

ಬಾಲಕೃಷ್ಣ ಮಾಜಿ ನಗರಸಭೆ ಸದಸ್ಯ.

ಈ ಉದ್ಯಾನವನ ಜಾಗವನ್ನು ಸಹ ಯಾರೋ ಖಾಸಗಿಯವರು ನುಂಗಿ ನೀರು ಕುಡಿಯಲು ಬಂದಿದ್ದರು ಆದರೆ ನಾವು ಹೋರಾಟ ಮಾಡಿದಕ್ಕೆ ಇವತ್ತು ಈ ಪಾರ್ಕ್ ಉಳಿದುಕೊಂಡಿದೆ.ಆರು ಕೋಟಿ ಹಣ ಬಿಡುಗಡೆಯಾಗಿದೆ. ಯಾವ ಕೆಲಸನೂ ಪೂರ್ಣಗೊಂಡಿಲ್ಲ.ಕಳೆದ ಆರು ವರ್ಷಗಳಿಂದ ಕಾಮಗಾರಿ ನಿಲ್ಲಿಸಲಾಗಿದೆ.ಪಾರ್ಕ್ ಆಗಿದೆ ಅಂತ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ ಆದರೆ ಏನೇನು ಕೆಲಸ ಆಗಿಲ್ಲ .ಪಾರ್ಕ್ ನಲ್ಲಿ ಕಸ ಹಾಕುವುದು,ಪುಂಡರು ರಾತ್ರಿ ವೇಳೆಯಲ್ಲಿ ಮದ್ಯಪಾನ ಮಾಡುವ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆದಷ್ಟು ಬೇಗ ಪಾರ್ಕನ್ನ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ವಾಗುವಂತೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.”

ಜಿಬಿಎ ಅಧಿಕಾರಿಗಳು ಇನ್ನಾದರೂ ಈ ಪಾರ್ಕ್ ನ ಅಭಿವೃದ್ಧಿಗೆ ಗಮನ ಅರಿಸಿ ಸಾರ್ವಜನಿಕ ಅನೂಕೂಲ ಆಗುವಂತೆ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯ ಮಾಡುತ್ತಿದ್ದಾರೆ.

You may also like

Leave a Comment