ಮಹದೇವಪುರ: ಕ್ಷೇತ್ರದ ಯಮಲೂರು ಸಿಜಿಐ ಕಚೇರಿಯಲ್ಲಿ ಬಿ.ಪ್ಯಾಕ್ ಹಾಗೂ ಸಿಜಿಐ ವತಿಯಿಂದ ಸ್ವಾವಲಂಬನೆಯ ಜೀವನ ನಡೆಸುವ ಮಹಿಳೆಯರಿಗೆ ಹಾಗೂ ಮಂಗಳಮುಖಿಯರಿಗೆ ಆಟೋ ಚಾಲನೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕಿ ಮಂಜುಳ ಲಿಂಬಾವಳಿ ಅವರು,
ನಿರಂತರವಾಗಿ ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಮಹಿಳೆಯರು ಹಾಗೂ ಮಂಗಳಮುಖಿಯರು ಕೂಡ ಸಮಾಜದ ಸಮಾನ ಸ್ಥಾನ ಭಾಗವಾಗುವ ನಿಟ್ಟಿನಲ್ಲಿ ಸ್ವಾವಲಂಬನೆಯ ಜೀವನ ನಡೆಸಲು ನೇರವಾಗಲು ಆಟೋ ಚಾಲನೆ ಸೇರಿದಂತೆ ಅನೇಕ ಆಯ್ಕೆಗಳಿದ್ದು, ಇಂದು ಆಟೋ ಚಾಲನೆ ತರಬೇತಿಗೆ ಚಾಲನೆ ನೀಡಲಾಯಿತು. ತರಬೇತಿ ಪಡೆದು ಸ್ವ ಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಿ ಎಂದು ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.

ಆಟೋ ಚಾಲನೆ ಮಾಡುವ ಮಹಿಳೆಯರಿಗೆ ಸೂಕ್ತ ಶೌಚಾಲಯದ ಕೊರತೆ ಇದೆ. ಕೆಲವೊಮ್ಮೆ ಸ್ವಚ್ಛ ಶೌಚಾಲಯವಿಲ್ಲದೇ ಕಷ್ಟಪಡುತ್ತಾರೆ. ಇವರಿಗಾಗಿಯೇ, ಅಲ್ಲಲ್ಲಿ ಸೂಕ್ತ ಶೌಚಾಲಯ ಸೇರಿದಂತೆ ಮೂಲಸೌಕರ್ಯ ನಿರ್ಮಿಸಿದರೆ, ಈ ಕ್ಷೇತ್ರದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.
ಮಹದೇವಪುರದಲ್ಲಿ ಐಟಿ ಕ್ಷೇತ್ರಕ್ಕೆ ಹೆಚ್ಚು ಆಪ್ತ. ಐಟಿ ಕ್ಷೇತ್ರಕ್ಕೆ ತೆರಳುವ ಮಹಿಳೆಯರ ಸಂಖ್ಯೆಯೂ ಹೆಚ್ಚು. ರಾತ್ರಿಪಾಳಿಯಲ್ಲಿ ಸುರಕ್ಷಿತವಾಗಿ ತೆರಳಲು ಮಹಿಳಾ ಚಾಲಕಿಯರಿರುವ ಆಟೋ ಹೆಚ್ಚು ಸುರಕ್ಷಿತ, ಹಾಗೆಯೇ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಜೀವನ ನಡೆಸುವವರಿಗೂ ಈ ಆಟೋಚಾಲನೆ ಉತ್ತಮ ಆಯ್ಕೆ. ಅವರಿಗಾಗಿಯೇ, ಉಚಿತವಾಗಿ ಚಾಲನೆ ನೀಡುವ ಜೊತೆಗೆ, ಆಟೋ ಸಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬಿ.ಪ್ಯಾಕ್ ಸಿಇಒ ರೇವತಿ ಅಶೋಕ್ ಮಾತನಾಡಿ, ಈ ಉಪಕ್ರಮವು ಮಹಿಳೆಯರಿಗೆ ಆಟೋ ಚಾಲನೆ ತರಬೇತಿ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಸುಸ್ಥಿರ ಜೀವನೋಪಾಯ ಮತ್ತು ಆರ್ಥಿಕ ಸ್ವಾವಲಂಬನೆಯತ್ತ ಕರೆದೊಯ್ಯುವ ಸಂಪೂರ್ಣ ಮಾರ್ಗವನ್ನು ನಿರ್ಮಿಸುವ ಪ್ರಯತ್ನವಾಗಿದೆ. ಚಾಲನಾ ಕೌಶಲ್ಯದ ಜೊತೆಗೆ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ಮೂಲಭೂತ ಇಂಗ್ಲಿಷ್ ಸಂವಹನ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ತರಬೇತಿ ನೀಡಲಾಗುತ್ತದೆ. ಅಲ್ಲದೆ, ಪರಿಹಾರ ಸಹಾಯವಾಣಿ ಕೇಂದ್ರ ಮತ್ತು ಸಂಚಾರ ನಿರ್ವಹಣಾ ಕಮಾಂಡ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಪ್ರಾಯೋಗಿಕ ಅನುಭವವನ್ನೂ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ BPAC ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ರೇವತಿ ಅಶೋಕ್, CGI ನಿರ್ದೇಶಕರು ಶ್ರೀ ಸುಧಾಕರ್ ಪೈ, ಉಪಾಧ್ಯಕ್ಷರು ಪ್ರಣವಿ, ಸಾಗರ್ ಪಟೇಲ್, ಪ್ರಧಾನ ಕಾರ್ಯದರ್ಶಿ ಶ್ರೀ ಲೋಕೇಶ್, ಯಮಲೂರು ವಾರ್ಡ್ ಅಧ್ಯಕ್ಷರು ಶ್ರೀ ಸುದರ್ಶನ್ ಹಾಗೂ ಮುಖಂಡರು ಕಾರ್ಯಕರ್ತರು ಮತ್ತು ತರಬೇತಿ ಪಡೆಯುವ ಆಕಾಂಕ್ಷಿಗಳು ಉಪಸ್ಥಿತರಿದ್ದರು.