ಬೆಂಗಳೂರು: ಹದಿನೈದು ದಿನಗಳ ಹಿಂದೆ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಸ್ನೇಹಿತನನ್ನು ಸುತ್ತಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಮಂಗಳವಾರ ಆವಲಹಳ್ಳಿ ಬಳಿ ನಡೆದಿದೆ. ಕುನಾಲ್ (22) ಹತ್ಯೆಯಾದವ. ಕೃತ್ಯ ಎಸಗಿದ ಎಂ.ಡಿ ನಸ್ರುಲ್ಲಾ (24) ಎಂಬಾತನನ್ನು ಬಂಧಿಸಲಾಗಿದೆ.
ಕುನಾಲ್, ನಸ್ರುಲ್ಲಾ ಬಿಹಾರ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು, ಆವಲಹಳ್ಳಿಯ ಕನ್ನಮಂಗಲದ ಗೋರವಿಗೆರೆ ಸಮೀಪದ ವೇರ್‌ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆ ಇಬ್ಬರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿದ್ದರು. ಪರಿಣಾಮ ನಸ್ರುಲ್ಲಾ ತಾಯಿ ಹಾಗೂ ಸಹೋದರಿಗೆ ಕುನಾಲ್ ಕೆಟ್ಟದಾಗಿ ಬೈದಿದ್ದ. ಅದರಿಂದ ಇಬ್ಬರ ನಡುವೆ ದ್ವೇಷ ಉಂಟಾಗಿತ್ತು.
ಸೋಮವಾರ ತಡರಾತ್ರಿ 12.30ರ ಸುಮಾರಿಗೆ ಮದ್ಯದ ಅಮಲಿನಲ್ಲಿ ಕುನಾಲ್ ಕುಮಾರ್ ರೂಮ್‌ಗೆ ಬಂದ ಬಂದ ನಸ್ರುಲ್ಲಾ, ಸುತ್ತಿಗೆಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ಕುನಾಲ್‌ನನ್ನು ಆತನ ಸ್ನೇಹಿತನೊಬ್ಬ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ ಮುಂಜಾನೆ 2.30ರ ಸುಮಾರಿಗೆ ಮೃತಪಟ್ಟಿದ್ದಾನೆ. ಪರಾರಿಯಾಗಿದ್ದ ಆರೋಪಿ ನಸ್ರುಲ್ಲಾನನ್ನು ದಾಬಸ್‌ಪೇಟೆಯ ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಗಿದೆ.