Wednesday, April 15, 2026
Home ಜಿಲ್ಲಾ‌ಸುದ್ದಿತ್ಯಾವರೆಕೊಪ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ: ವೈದ್ಯೆ ಸಾವು

ತ್ಯಾವರೆಕೊಪ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ: ವೈದ್ಯೆ ಸಾವು

by Dharmaraju
0 comments

ಶಿವಮೊಗ್ಗ: ಇಲ್ಲಿನ ತಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಗುರುವಾರ ತಡರಾತ್ರಿ ಚಿಕಿತ್ಸೆ‌ ನೀಡಲು ತೆರಳಿದ್ದ ವೇಳೆ ನೀರಾನೆ (Hippopotamus) ದಾಳಿಯಿಂದ ತೀವ್ರ ಗಾಯಗೊಂಡಿದ್ದ ವನ್ಯಜೀವಿ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಿಗ್ಗೆ‌ ನಿಧನರಾಗಿದ್ದಾರೆ.

ಸಮೀಕ್ಷಾ ರೆಡ್ಡಿ (26) ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ (ಜಿಕೆವಿಕೆ) ಪದವಿ ಮುಗಿಸಿದ್ದ ಅವರು ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿನ ಹುಲಿ ಸಿಂಹ ಧಾಮಕ್ಕೆ ತರಬೇತಿಗೆ ನೇಮಕಗೊಂಡಿದ್ದರು.
ಗರ್ಭಿಣಿ ಆಗಿದ್ದ ನೀರಾನೆ‌ ಇನ್ಜು ನಾಲ್ಕು ದಿನಗಳಲ್ಲಿ ಅದರ ಹೆರಿಗೆಗೆ ದಿನ ನಿಗದಿಯಾಗಿತ್ತು. ಅದು ರಾತ್ರಿ ಆಹಾರ ಸೇವಿಸಿರದ ಕಾರಣ ಪರಿಶೀಲನೆಗೆ ಡಾ.ಸಮೀಕ್ಷಾ ಅದರ ನೆಲೆಯತ್ತ ತೆರಳಿದ್ದಾರೆ. ಈ ವೇಳೆ ಆ ನೀರಾನೆ ದಾಳಿ ಮಾಡಿದೆ. ತೀವ್ರ ರಕ್ತ ಸ್ರಾವದಿಂದ ಪ್ರಜ್ಞಾಹೀನರಾಗಿದ್ದ ಅವರನ್ನು ಮೃಗಾಲಯ ಸಿಬ್ಬಂದಿ ಇಲ್ಲಿನ‌ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ನೀರಾನೆ ದಾಳಿಯಿಂದ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ (inquiry) ಆದೇಶಿಸಿದ್ದಾರೆ.

ದುರಂತದ ಕುರಿತು ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ತಂಡವು ಕೂಲಂಕಷವಾಗಿ ತನಿಖೆ ನಡೆಸಲಿದೆ. ಘಟನೆ ಸಂಭವಿಸಲು ಕಾರಣಗಳೇನು ಮತ್ತು ಸುರಕ್ಷತಾ ಲೋಪಗಳಿವೆಯೇ ಎಂಬ ಬಗ್ಗೆ ಪರಾಮರ್ಶಿಸಿ, ಮುಂದಿನ 7 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.

You may also like

Leave a Comment