ಕೆ.ಆರ್.ಪುರ: ರೋಲ್ ಕಾಲ್ ವಸೂಲಿ ತಡೆಗಟ್ಟಿ, ಒತ್ತುವರಿಯಾದ ರಸ್ತೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಕಾರ್ಯಕರ್ತರು ಗೋಣಿಚೀಲ ತೊಟ್ಟು ಕೆ.ಆರ್.ಪುರದ ಸಂತೆ ಮೈದಾನದಿಂದ ಸಂಚಾರಿ ಉಪ ಆಯುಕ್ತರ ಕಚೇರಿವರೆಗೂ ಕಾಲ್ನಡಿಗೆ ಜಾಥಾ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಅವರು ಕೆಆರ್ ಪುರ ಸಂತೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಒಂದು ಗಂಟೆಯಿಂದ ಬೆಳಗಿನ ಜಾವ ಎಂಟು ಗಂಟೆವರೆಗೂ ಹಲವು ರೈತರು ಹಾಗೂ ವ್ಯಾಪಾರಿಗಳು ರಾಷ್ಟ್ರೀಯ ಹೆದ್ದಾರಿಯನ್ನ ಮುಕ್ಕಾಲು ಭಾಗ ವ್ಯಾಪರಕ್ಕೆ ಉಪಯೋಗಿಸುಕೊಳ್ಳುತ್ತಿದ್ದಾರೆ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಆಂಬ್ಯೂಲೆನ್ಸ್ ವಾಹನಗಳು ಮತ್ತು ಶಾಲಾ ಮಕ್ಕಳ ವಾಹನಗಳಿಗೂ ಸಹ ರಸ್ತೆಯನ್ನು ಬಿಡುವುದಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದರು.
ಸಂತೆ ಪ್ರದೇಶದಿಂದ 1.5 ಕಿಮೀ ದೂರದಲ್ಲಿರುವ ಅಂಗಡಿಗಳಿಂದಲೂ ಅಕ್ರಮವಾಗಿ ಸುಂಕ ವಸೂಲಿ ಮಾಡಲಾಗುತ್ತಿದೆ ಅಲ್ಲದೆ ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳಿಗೆ ₹1000 ರೂಗಳು ಹಾಗೂ ಅಂಗಡಿ ಹಾಕಿಕೊಂಡವರ ಬಳಿ ₹300 ರೂಗಳಿಂದ ₹400 ರೂಗಳ ವರೆಗೂ ಹಣವನ್ನು ಅಕ್ರಮವಾಗಿ ವಸೂಲಿ ಮಾಡುತ್ತಿದ್ದು ಇದನ್ನು ತಡೆಗಟ್ಟಲು ಸಂತೆಯ ಗಡಿ ಗುರುತಿಸುವಂತೆ ಒತ್ತಾಯಿಸಿದರು.
ಪೊಲಿಸರಿಗೆ ದುಡ್ಡು ನೀಡುತ್ತಿದ್ದೇವೆ ನಮ್ಮನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡು ಕಿಡಿಗೇಡಿಗಳು ಓಡಾಡುತ್ತಿದ್ದಾರೆ. ಇಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಸಂಬಂಧ ಪಟ್ಟ ಇಲಾಖೆಗಳು, ಸಂಚಾರಿ, ಹಾಗೂ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ದೂರು ದಾಖಲಿಸಿದ್ದರು ಯಾವುದೇ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮನವಿಗೆ ಸ್ಪಂದಿಸಿದ ಆಯುಕ್ತ ರಮೇಶ್ ಶೀಘ್ರವಾಗಿ ಸಂತೆ ಗಡಿ ಗುರುತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿ.ವಿ ಶಿವಶಂಕರ್, ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಪದಾಧಿಕಾರಿಗಳಾದ ಆರ್, ಕುಮಾರ್, ವಿನೋದ್ ಕುಮಾರ್, ಶ್ರೀನಿವಾಸ್ ಮತ್ತಿತರರು ಇದ್ದರು.
