Wednesday, April 15, 2026
Home ಜಿಲ್ಲಾ‌ಸುದ್ದಿನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿಯಾಗಿ ಮೂರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ದುರ್ಮರಣ.

ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿಯಾಗಿ ಮೂರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ದುರ್ಮರಣ.

by Dharmaraju
0 comments

ಬೆಂಗಳೂರು: ನಿಂತಿದ್ದ ಲಾರಿಗೆ ಬುಲೆಟ್‌ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಕುದೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನಜಾವ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಗಳನ್ನು ಆಚಾರ್ಯ ಎಂಜಿನಿಯರಿಂಗ್‌ ಕಾಲೇಜಿನ ಅಭಿಷೇಕ್‌ (21) ಮತ್ತು ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ಮನೋಜ್‌ (22) ಹಾಗೂ ನವೀನ್‌ (22) ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆಯ ನವೀನ್‌, ಬೇಲೂರಿನ ಅಭಿಷೇಕ್‌ ಹಾಗೂ ದಾವಣಗೆರೆಯ ಮನೋಜ್‌ ಸ್ನೇಹಿತರಾಗಿದ್ದು, ಕಾಲೇಜು ಹಾಸ್ಟೆಲ್‌ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರುಗಳ ಪೈಕಿ ಒಬ್ಬ ಸ್ನೇಹಿತನ ಮನೆಗೆ ಒಂದೇ ಬುಲೆಟ್‌ ಬೈಕ್‌ನಲ್ಲಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಮೂವರು ಹೋಗುತ್ತಿದ್ದರು.
ಮರೂರು ಹ್ಯಾಂಡ್‌ಪೋಸ್ಟ್‌ ಬಳಿ ರಸ್ತೆ ಬದಿ ಲಾರಿ ನಿಲ್ಲಿಸಿರುವುದು ಗಮನಕ್ಕೆ ಬಂದಿಲ್ಲ. ಹಾಗಾಗಿ ಬೈಕ್‌ ಚಾಲನೆ ಮಾಡಿಕೊಂಡು ಹೋಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.ಡಿಕ್ಕಿಯ ರಭಸಕ್ಕೆ ಮೂವರು ಒಂದೊಂದು ಕಡೆ ಹಾರಿ ಬಿದ್ದು ಗಂಭೀರ ಗಾಯಗೊಂಡಿದ್ದು, ಅಭಿಷೇಕ್‌ ಹಾಗೂ ಮನೋಜ್‌ ಸ್ಥಳದಲ್ಲೇ ಸಾವನ್ನಪ್ಪಿದರೆ, ನವೀನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ಕುದೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮೃತ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ಅವರ ಪೋಷಕರುಗಳಿಗೆ ವಿಷಯ ತಿಳಿಸಿದ್ದಾರೆ.
ಮೂವರು ವಿದ್ಯಾರ್ಥಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳ ಸಾವಿನ ಸುದ್ದಿ ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

You may also like

Leave a Comment