ತಮಿಳುನಾಡು ವಿಧಾನಸಭಾ ಚುನಾವಣೆಯ ರಾಜಕೀಯ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಿವಿಕೆ ನಟ ವಿಜಯ್ ಸೋಮವಾರ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಚೆನ್ನೈನ ಕೊಳತ್ತೂರಿನಿಂದ ಸತತ 4ನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಸ್ಟಾಲಿನ್ 2011, 2016 ಹಾಗೂ 2021ರಲ್ಲಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಸಿಎಂ ಸ್ಟಾಲಿನ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಸ್ಟಾಲಿನ್ ಕೊಳತ್ತೂರ್ ವಿಧಾನಸಭಾ ಕ್ಷೇತ್ರದಲ್ಲಿನ ಅಭಿವೃದ್ಧಿ ಕುರಿತ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಟಿವಿಕೆ ಮುಖ್ಯಸ್ಥ, ನಟ ವಿಜಯ್ ಚೆನ್ನೈನ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಜನವಿರೋಧಿ ಸ್ಟಾಲಿನ್ ಸರ್ಕಾರ ನಿಮಗೆ ಬೇಕೇ? ಅಥವಾ ಜನರನ್ನು ಪ್ರೀತಿಸುವ ವಿಜಯ್ ನಿಮಗೆ ಬೇಕೇ? ದಯವಿಟ್ಟು ಒಂದು ಅವಕಾಶ ನೀಡಿ. ಸೀಟಿ ಚಿಹ್ನೆಗೆ ಮತ ಚಲಾಯಿಸಿ. ಈ ಚುನಾವಣೆಯಲ್ಲಿ ಸೀಟಿ ಕಾಂತ್ರಿಯಾಗಬೇಕು ಎಂದು ಹೇಳಿದ್ದಾರೆ.
ಮೂಲಭೂತ ಸೌಕರ್ಯಗಳು ಇಲ್ಲದೆ ಬದುಕುವುದು ಹೇಗೆ? ಸ್ಟಾಲಿನ್‌ಗೆ ಜನರ ಬಗ್ಗೆ ಕಾಳಜಿ ಇಲ್ಲ, ಡಿಎಂಕೆ ಸರ್ಕಾರ ರಾಜ್ಯವನ್ನು ಲೂಟಿ ಮಾಡುವುದರಲ್ಲೇ ಕಾಲ ಕಳೆದಿದೆ ಎಂದು ಕಿಡಿಕಾರಿದ್ದಾರೆ.
2026ರ ವಿಧಾನಸಭಾ ಚುನಾವಣೆಯು ವಿಜಯ್ ಅವರ ಚೊಚ್ಚಲ ಚುನಾವಣೆಯಾಗಿದ್ದು, ಅವರು ಚೆನ್ನೈನ ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾರ್ಮಿಕ ವರ್ಗ ಹೆಚ್ಚಾಗಿದೆ. ಅಲ್ಲದೆ ಪೂರ್ವ ತಿರುಚಿರಾಪಳ್ಳಿಯಿಂದಲೂ ಸ್ಪರ್ಧಿಸುತ್ತಿದ್ದಾರೆ.