ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಜಲಪಾತವೊಂದರಲ್ಲಿ ಮೂವರು ಹದಿಹರೆಯದ ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಫೋಟೋ ತೆಗೆಯುತ್ತಿದ್ದಾಗ ಬಂಡೆಯಿಂದ ಆಯತಪ್ಪಿ ನೀರಿಗೆ ಬಿದ್ದು ಈ ದುರಂತ ಸಂಭವಿಸಿದ್ದು, ಅವರ ಕೊನೆಯ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇಲ್ಲಿನ ಹುಕುಂಪೇಟ ಮಂಡಲದ ಬುರ್ಜಾ ಪಂಚಾಯತ್ ಬಳಿಯ ಮುಲ್ಲುನ್ಗುಮ್ಮಿ ಎಂಬ ಜಲಪಾತದ ಬಳಿ ಈ ದುರಂತ ಸಂಭವಿಸಿದೆ. ರಜಾ ದಿನವಾಗಿದ್ದರಿಂದ ಜಂಬವಲಸಾ ಗ್ರಾಮದ ಐವರು ಹುಡುಗಿಯರು ಈ ಜಲಪಾತವನ್ನು ನೋಡುವುದಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ನೀರಿನಲ್ಲಿ ಈಜಾಡುತ್ತಾ ಎಂಜಾಯ್ ಮಾಡುತ್ತಿದ್ದಾಗ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದು, ಇದೇ ವೇಳೆ ಈ ದುರಂತ ಸಂಭವಿಸಿದೆ.
ಪೊಲೀಸರ ಪ್ರಕಾರ, ಈ ಹುಡುಗಿಯರು ಸೇತುವೆಯ ಬಳಿಯೇ ಫೋಟೋ ಹಾಗೂ ಸೆಲ್ಫಿ ವೀಡಿಯೋ ಮಾಡಿದ್ದಾರೆ. ಬಳಿಕ ಐವರಲ್ಲಿ ಮೂವರು ಹುಡುಗಿಯರು ಜಲಪಾತದ ಮಧ್ಯೆ ಇರುವ ದೊಡ್ಡ ಬಂಡೆಯೊಂದನ್ನು ಏರಿದ್ದಾರೆ. ಇದೇ ವೇಳೆ ಅವರು ಅಲ್ಲಿಂದ ಆಯತಪ್ಪಿ ನೀರಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಹೋಗಿದ್ದಾರೆ.
ಅಲ್ಲಿದ್ದ ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ನೀರಿನ ಹರಿವಿನ ರಭಸಕ್ಕೆ ಸಿಲುಕಿ ಯುವತಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಮೃತದೇಹಗಳನ್ನು ನಂತರ ನೀರಿನಿಂದ ಮೇಲೆತ್ತಲಾಗಿದೆ. ಹೀಗೆ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ಹರೆಯದ ಬಾಲಕಿಯರನ್ನು 17 ವರ್ಷದ ತ್ರಿಶಾ 16 ವರ್ಷದ ರತ್ನಕುಮಾರಿ, ಹಾಗೂ 16 ವರ್ಷದ ಪವಿತ್ರಾ ಎಂದು ಗುರುತಿಸಲಾಗಿದೆ. ಉಳಿದಿಬ್ಬರು ಯುವತಿಯರು ಸುರಕ್ಷಿತವಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಈ ಘಟನೆ ಈಗ ಸ್ಥಳೀಯರಲ್ಲಿ ತೀವ್ರ ಕಳವಳ ಮೂಡಿಸಿದೆ. ಘಟನೆ ನಡೆದ ಸ್ಥಳವು ಅಲ್ಲುರಿ ಜಿಲ್ಲೆಯಲ್ಲಿ ಬರುವ ಅತೀ ಸುಂದರವಾದ ಜಲಪಾತವಾಗಿದ್ದು, ಸುಂದರವಾದ ನೈಸರ್ಗಿಕ ದೃಶ್ಯಗಳಿಂದ ಗಮನ ಸೆಳೆಯುತ್ತಿದೆ. ಇಲ್ಲಿ ಈ ಹಿಂದೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದಂತಹ ಹಲವು ಘಟನೆಗಳು ನಡೆದಿದ್ದವು.