ಮಹದೇವಪುರ: ಅಸ್ಪೃಶ್ಯತೆ, ಅಸಮಾನತೆ, ಶೋಷಣೆಗಳನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರಂತರವಾಗಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಗ್ರಾಮಾಂತರ ಮಂಡಲ ವತಿಯಿಂದ ನಡೆದ ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನವೆಂಬ ಶ್ರೇಷ್ಠ ಗ್ರಂಥವನ್ನು ನೀಡಿದ ಅಂಬೇಡ್ಕರ್ ಅವರ ಜೀವನವೇ ನಮಗೆಲ್ಲರಿಗೂ ಆದರ್ಶ ಮತ್ತು ಮಾದರಿ. ಅಂಬೇಡ್ಕರ್ ಕಂಡ ಕನಸು ಸಮಾನ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಕೈಜೋಡಿಸೋಣ ಎಂದರು.

ಬಾಲ್ಯದಲ್ಲಿಯೇ ಶೋಷಣೆ, ಅಸ್ಪೃಶ್ಯತೆ, ಅವಮಾನ, ಹಿಂಸೆ, ಸಂಕಟಗಳನ್ನು ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣದಿಂದ ಮಾತ್ರ ಶೋಷಣೆ ತಪ್ಪಿಸಲು ಸಾಧ್ಯ ಎನ್ನುವುದನ್ನು ಮನಗಂಡು ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ನೀಡಿದ್ದಾರೆಂದು ತಿಳಿಸಿದರು.
ರಾಷ್ಟ್ರ ಕಂಡ ಶ್ರೇಷ್ಠ ವ್ಯಕ್ತಿತ್ವ ಅಂಬೇಡ್ಕರ್ ಅವರ ಹಾಗೂ ಬಾಬು ಜಗಜೀವನ್ ರಾವ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದೇವೆ. ಬಾಬಾ ಸಾಹೇಬರು ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಧೀಮಂತ ನಾಯಕರು ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮಾಜಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ಎಸ್ ಸಿ ಮೋರ್ಚಾ ಅಧ್ಯಕ್ಷ ಆದೂರು ಮುನಿರಾಜು, ಮುಖಂಡರಾದ ಮಾರಪ್ಪ, ಜ್ಯೋತಿಪುರ ವೇಣು, ಕಣ್ಣೂರು ಅಶೋಕ್, ಎಲ್.ರಾಜೇಶ್, ಬಿದರಹಳ್ಳಿ ರಾಜೇಶ್, ಕೆ.ವಿ. ನಾಗರಾಜ್, ಬೈರತಿ ರಮೇಶ್, ಕೆಂಪೇಗೌಡ, ಕೆ.ಡಿ.ವೆಂಕಟೇಶ್ ಮತ್ತಿತರರಿದ್ದರು.