ದೊಡ್ಡಬಳ್ಳಾಪುರ: ಐತಿಹಾಕಿಸ ಮಹಿಳೆ ಚಿನ್ನಮ್ಮನ ಉತ್ಸವ ಬಹಳ ವರ್ಷಗಳ ಕನಸು ಈಗ ನನಸಾಗು ಭಾಗ್ಯ ಬಂದಿದ್ದು ಏ.19ರಂದು ಸಾಸಲು ಚಿನ್ನಮ್ಮ ಉತ್ಸವ-2026ನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ ಮಾಜಿ ಅಧ್ಯಕ್ಷ ಲಾವಣ್ಯ ನಾಗರಾಜ್ ತಿಳಿಸಿದರು.
ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು, ಸಾಸಲು ಹೋಬಳಿ ಚಿನ್ನಮ್ಮ ಸಮಿತಿ ವತಿಯಿಂದ ನಡೆಯಲಿರುವ ಸಾಸಲು ಚಿನ್ನಮ್ಮ ಉತ್ಸವವು ಏ. 19ರಂದು ಬೆಳಗ್ಗೆ 8 ಗಂಟೆಗೆ ಪೂಜೆ ಸಲ್ಲಿಸಿ ಬಳಿಕ ವೀರಗಾಸೆ, ಡೊಳ್ಳು ಕುಣಿತ ಜಾನಪದ ಕಲಾ ತಂಡಗಳೊಂದಿಗೆ ಉತ್ಸವ ಚಿಲಕಲ ಬಂಡಿಯಲ್ಲಿ ಮೆರವಣಿಗೆ ಮಾಡುವುದರೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 10 ಕ್ಕೆ ಸರಿಯಾಗಿ ಗ್ರಾಮದ ಅಂಬೇಡ್ಕರ್ ಆಸ್ಪತ್ರೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು ಈ ಕಾರ್ಯಕ್ರಮವನ್ನು ಸಾಹಿತಿಗಳಾದ ಡಿ.ಕೆ ಚಿತ್ತಯ್ಯ ಪೂಜಾರ್ ಉದ್ಘಾಟನೆ ಮಾಡಲಿದ್ದಾರೆ. ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ. ಗೋವಿಂದರಾಜು ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿರುತ್ತದೆ. ಸಾಸಲು ಹೋಬಳಿ ಕುರಿತು ಚಿಂತನ-ಮಂಥನ ವಿಚಾರಗೋಷ್ಠಿ , ರಾತ್ರಿ 7 ಗಂಟೆಗೆ ಸಾಸಲು ಚೆನ್ನಮ್ಮ ಕುರಿತ ನಾಟಕ ನಡೆಯಲಿದೆ ಎಂದರು.
ಇದೇ ವೇದಿಕೆಯಲ್ಲಿ ಜಾನಪದ ವಿದ್ವಾಂಸರಾದ ಸಣ್ಣ ನಾಗಪ್ಪ ಇವರು ಸಾಸಲು ಚಿನ್ನಮ್ಮ ಪರಿಚಯದ ಕಿರುಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧೀರಾಜ್ ಮುನಿರಾಜು ಶಾಸಕರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ, ಟಿ.ವೆಂಕಟರಮಣಯ್ಯ ಮಾಜಿ ಶಾಸಕರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ, ಬಿ. ಮುನೇಗೌಡ, ಮಾಜಿ ಅಧ್ಯಕ್ಷರು ಕಿಮ್ಸ್ ಆಸ್ಪತ್ರೆ, ಬೆಂಗಳೂರು ಇವರುಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಹೋಬಳಿ ಕಸಾಪ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಸಾಸಲು ಚಿನ್ನಮ್ಮ ಉತ್ಸವ ಸಮಿತಿಯ ಮುಖಂಡರುಗಳಾದ ವಕೀಲರಾದ ನರಸಿಂಹಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಗ್ರಾಮಪಂಚಾಯಿತಿ ಸದಸ್ಯ ಪಚ್ಚಾರಹಳ್ಳಿ ರಮೇಶ್, ಉಪನ್ಯಾಸಕ ಕೇಶವಮೂರ್ತಿ, ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.