Tuesday, May 19, 2026
Home ಜಿಲ್ಲಾ‌ಸುದ್ದಿಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನವನ್ನ ವಾರಸುದಾರರಿಗೆ ಹಸ್ತಾಂತರ

ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನವನ್ನ ವಾರಸುದಾರರಿಗೆ ಹಸ್ತಾಂತರ

by Dharmaraju
0 comments

ಶಿರಸಿ: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಎನ್ನುವುದು ಅಪರೂಪವಾಗುತ್ತಿರುವಾಗ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ಸಿಬ್ಬಂದಿಗಳು ತಮಗೆ ಸಿಕ್ಕ ಬೆಲೆಬಾಳುವ ಚಿನ್ನವನ್ನು ವಾರಸುದಾರರಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಕ್ಷಯ ತೃತೀಯದ ಪ್ರಯುಕ್ತ ನಾಗವೇಣಿ ಗೌಡ ಅವರು ಶಿರಸಿಯ ಕಾಮಧೇನು ಜ್ಯುವೆಲರ್ಸ್‌ನಲ್ಲಿ 82,000 ರೂ. ಬೆಲೆಬಾಳುವ 5 ಗ್ರಾಂ ಚಿನ್ನದ ಗಟ್ಟಿಯನ್ನು ಖರೀದಿಸಿದ್ದರು. ಬಳಿಕ ಶಿರಸಿ ಕೆಎಚ್‌ಬಿ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅವರು, ಬಸ್ಸಿನಿಂದ ಇಳಿಯುವಾಗ ಆಕಸ್ಮಿಕವಾಗಿ ಚಿನ್ನವಿದ್ದ ಬ್ಯಾಗನ್ನು ಸೀಟಿನ ಮೇಲೆಯೇ ಮರೆತು ಹೋಗಿದ್ದರು.

ಬಸ್ಸು ಸಂಚರಿಸುತ್ತಿದ್ದಾಗ ಬ್ಯಾಗ್ ಇರುವುದನ್ನು ಗಮನಿಸಿದ ನಿರ್ವಾಹಕರಾದ ರಮೇಶ್ ನಾಯ್ಕ್ ಹಾಗೂ ಚಾಲಕರಾದ ವೆಂಕಟರಮಣ ನಾಯ್ಕ್ ಮತ್ತು ಅವರು ತಕ್ಷಣ ಅದನ್ನು ಪರಿಶೀಲಿಸಿದ್ದಾರೆ. ಬ್ಯಾಗ್‌ನಲ್ಲಿ ಬೆಲೆಬಾಳುವ ಚಿನ್ನದ ಗಟ್ಟಿ ಇರುವುದನ್ನು ಕಂಡ ಸಿಬ್ಬಂದಿಗಳು, ಅದನ್ನು ಅತ್ಯಂತ ಜವಾಬ್ದಾರಿಯಿಂದ ಕಾಪಾಡಿ ಡಿಪೋಗೆ ತಂದಿದ್ದಾರೆ.

ಶಿರಸಿ ಬಸ್ ಡಿಪೋದ ಟ್ರಾಫಿಕ್ ಸೂಪರ್ಡೆಂಟ್ ಮಹೇಶ್ ಜೋಗಳೇಕರ್ ಹಾಗೂ ನಿರೀಕ್ಷಕರಾದ ರಘುಪತಿ ನಾಯ್ಕ್ ಅವರ ಸಮಕ್ಷಮದಲ್ಲಿ, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಚಿನ್ನದ ಬ್ಯಾಗನ್ನು ವಾರಸುದಾರರಾದ ಶಿಕ್ಷಕಿ ನಾಗವೇಣಿ ಗೌಡ ಅವರಿಗೆ ಹಸ್ತಾಂತರಿಸಲಾಯಿತು.

ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಪ್ರಾಮಾಣಿಕತೆಯಿಂದಾಗಿ ನನ್ನ ವಸ್ತು ಸುರಕ್ಷಿತವಾಗಿ ಮರಳಿ ಸಿಕ್ಕಿದೆ. ಇಂತಹ ಪ್ರಾಮಾಣಿಕ ಕೆಲಸ ನಿಜಕ್ಕೂ ಶ್ಲಾಘನೀಯ, ಎಂದು ಶಿಕ್ಷಕಿ ನಾಗವೇಣಿ ಗೌಡ ಅವರು ತಮ್ಮ ಕೃತಜ್ಞತೆ ಸಲ್ಲಿಸಿದರು.

ಸಾರ್ವಜನಿಕರು ಸಾರಿಗೆ ಸಿಬ್ಬಂದಿಗಳ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮೇಲಿನ ನಂಬಿಕೆ ಈ ಘಟನೆಯಿಂದ ಮತ್ತಷ್ಟು ಹೆಚ್ಚಾದಂತಾಗಿದೆ

You may also like

Leave a Comment