ಮಣಿಪಾಲ: ವಿದ್ಯಾಕಾಶಿ, ಸುಶಿಕ್ಷಿತರ ನಾಡು ಎಂದೇ ಕರೆಸಿಕೊಳ್ಳುವ ಉಡುಪಿಯ ಮಣಿಪಾಲದಲ್ಲಿ ಯುವಜೋಡಿಯೊಂದು ನಡುರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿದೆ.
ಮಣಿಪಾಲದ ಜನನಿಬಿಡ ರಸ್ತೆಯಲ್ಲಿ ತಡರಾತ್ರಿ ಯುವಕ ಮತ್ತು ಯುವತಿಯೊಬ್ಬರು ಸಾರ್ವಜನಿಕವಾಗಿ ಪರಸ್ಪರ ಆಲಂಗಿಸಿಕೊಂಡು ರೋಮ್ಯಾನ್ಸ್ ಮಾಡುತ್ತಿದ್ದರು. ವಿದೇಶಿ ಸಂಸ್ಕೃತಿಗೆ ಮಾರುಹೋಗಿರುವ ಈ ಯುವಜನತೆ, ಸಾರ್ವಜನಿಕ ಸ್ಥಳ ಎಂಬ ಪರಿಜ್ಞಾನವೇ ಇಲ್ಲದೆ ವರ್ತಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ನಾಗರಿಕರೊಬ್ಬರು ಈ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದಾಗ, ತಪ್ಪು ಒಪ್ಪಿಕೊಳ್ಳುವ ಬದಲು ಯುವಕ ಆಕ್ರೋಶಗೊಂಡು ಮರು ಪ್ರಶ್ನೆ ಮಾಡಿದ್ದಾನೆ. ನಾಗರಿಕರ ತರಾಟೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಜೋಡಿ ಅಲ್ಲಿಂದ ಜಾಗ ಖಾಲಿ ಮಾಡಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಇದು ಶಿಕ್ಷಣ ಪಡೆಯುವ ಜಾಗವೋ ಅಥವಾ ಇಂತಹ ಅಸಭ್ಯ ಕೆಲಸ ಮಾಡುವ ಜಾಗವೋ?” ಎಂದು ಹಲವರು ಪ್ರಶ್ನಿಸಿದ್ದಾರೆ.
ಮಣಿಪಾಲದಂತಹ ಶೈಕ್ಷಣಿಕ ಕೇಂದ್ರದಲ್ಲಿ ಇಂತಹ ಘಟನೆಗಳು ಸಂಸ್ಕೃತಿಯ ಅಧಃಪತನಕ್ಕೆ ಸಾಕ್ಷಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.