ಕೆ.ಆರ್ ಪುರ: ಶಿಕ್ಷಣವು ಜೀವನವನ್ನು ಪರಿವರ್ತಿಸಲು, ಅವಕಾಶಗಳನ್ನು ಸೃಷ್ಟಿಸಲು ಮತ್ತು ಪ್ರಬಲವಾದ ಸಮಾಜವನ್ನು ನಿರ್ಮಿಸಲು ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಎಸ್ ಇಎ ವಿದ್ಯಾಸಂಸ್ಥೆ 25 ವರ್ಷ ಪೂರ್ಣಗೊಂಡ ಹಿನ್ನೆಲೆ ಬೆಳ್ಳಿ ಮಹೋತ್ಸವ ಸಮಂತರ (ಸಾಂಸ್ಕೃತಿಕ ಉತ್ಸವ ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮೊದಲಿಗೆ ತಮ್ಮ ಜೀವನದಲ್ಲಿ ಶಿಸ್ತು, ಸಂಯಮವನ್ನು ಬೆಳೆಸಿಕೊಳ್ಳಬೇಕು, ತಾಳ್ಮೆ ಯಶಸ್ಸಿಗೆ ಬೇಕು, ಈ ಮೂರನ್ನು ಅಳವಡಿಸಿಕೊಂಡರೆ ಯಶಸ್ಸು ಸಿಕ್ಕೆ ಸಿಗುತ್ತದೆ ಎಂದರು.
ಯುವ ಮನಸ್ಸುಗಳು ಜ್ಞಾನ, ಮೌಲ್ಯಗಳು ಮತ್ತು ಶಿಸ್ತಿನಿಂದ ಮಾರ್ಗದರ್ಶಿಸಲ್ಪಟ್ಟಾಗ, ಅವು ಉತ್ತಮ ನಾಳೆಯನ್ನು ರೂಪಿಸುವ ಶಕ್ತಿಯಾಗುತ್ತವೆ. ನಾವು ಮುಂದುವರಿಯುತ್ತಿದ್ದಂತೆ, ನಾವು ನಮ್ಮ ಸಂಸ್ಕೃತಿ ಮತ್ತು ತತ್ವಗಳಲ್ಲಿ ಬೇರೂರಿರುವುದು ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕನಸು ಕಾಣಬೇಕು, ಸಾಧಿಸುವ ಬಯಕೆಯಿಂದಿರಬೇಕು, ಕಠಿಣ ಪರಿಶ್ರಮಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಮತ್ತು ಜೀವನದ ಪ್ರತಿ ಹಂತದಲ್ಲೂ ಶಿಸ್ತನ್ನು ಎತ್ತಿಹಿಡಿಯಬೇಕು ಸಲಹೆ ನೀಡಿದರು.
ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ಎ.ಕೃಷ್ಣಪ್ಪ ಅವರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು, ಅಂದಿನಿಂದಲೂ ಒಳ್ಳೆಯ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಕಾರ್ಯನಿರತವಾಗಿದೆ. ಒಳ್ಳೆಯ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬಹುಮುಖ್ಯ ಎಂದು ತಿಳಿಸಿದರು.

ಎಸ್ ಇಎ ಸಮೂಹ ಸಂಸ್ಥೆಯ ಸಿಇಒ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ನಮ್ಮ ತಂದೆ ಎ.ಕೃಷ್ಣಪ್ಪ ಅವರು ಹೇಳಿದಂತೆ ಶಿಕ್ಷಣ ಹಾಗೂ ಆರೋಗ್ಯ ಮನುಷ್ಯನ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ, ಶಿಕ್ಷಣ, ಉತ್ತಮ ಆರೋಗ್ಯ ವಿದ್ದರೇ ಮಾತ್ರ ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು.
ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕೆ.ಜಿ. ಟು ಪಿಜಿ ವರೆಗೆ ಶಿಕ್ಷಣವಿದ್ದು 9 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರ ಜೊತೆಗೆ ನಡೆ,ನುಡಿ, ಆಚಾರ,ವಿಚಾರ ,ಸಂಸ್ಕೃತಿ, ಸಂಸ್ಕಾರ ಎಲ್ಲವನ್ನು ಕಲಿಸಿಕೊಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮೂಹ ಸಂಸ್ಥೆ ನಿರ್ದೇಶಕರು, ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ತಹಶೀಲ್ದಾರ್ ರಾಜೀವ್, ಜಿಬಿಎ ಜಂಟಿ ಆಯುಕ್ತರಾದ ಡಾ. ಸುಧಾ ಸ್ವಪ್ನ, ಖಜಾಂಚಿ ಅನುಪಮ , ಜಂಟಿ ನಿರ್ದೇಶಕರಾದ ಬ್ರಿಜೇಶ್, ವಿನೀಶ, ರೋಹನ್ , ಡಾ.ತನುಶ್ರೀ ಇದ್ದರು.
