ಬೆಂಗಳೂರು: ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು, ರಕ್ಷಣೆ ನೀಡಬೇಕಾದ ವ್ಯಕ್ತಿಯೇ ಭಕ್ಷಕನಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC) ಸದಸ್ಯ ಚಂದ್ರೇಗೌಡ ಎಂಬಾತನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಈತನ ಮೊಬೈಲ್ ಕೆದಕಿದ ಪೊಲೀಸರಿಗೇ ಶಾಕ್ ಕಾದಿತ್ತು!
ಆರೋಪಿ ಚಂದ್ರೇಗೌಡ ಕೇವಲ ಒಬ್ಬ ವ್ಯಕ್ತಿಯಲ್ಲ, ಈತ ನಕಲಿ ಐಡಿ ಕಾರ್ಡ್‌ಗಳ ಸರದಾರ. ತಾನು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಹಾಗೂ ಉಪನ್ಯಾಸಕ ಎಂದು ಸುಳ್ಳು ಹೇಳಿ ಮಹಿಳೆಯರನ್ನು ನಂಬಿಸುತ್ತಿದ್ದ. ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರಿಗೆ ಮದುವೆಯಾಗುವ ನಾಟಕವಾಡಿ, ಆಕೆಯ ಕೊರಳಿಗೆ ಅರಿಶಿನದ ಕೊಂಬು ಕಟ್ಟಿ ನಂಬಿಸಿದ್ದ.
ಮೊಬೈಲ್‌ನಲ್ಲಿತ್ತು 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋ!
ಸಂತ್ರಸ್ತ ಮಹಿಳೆ ಚಂದ್ರೇಗೌಡನ ಮೊಬೈಲ್ ನೋಡಿದಾಗ ಈತನ ಅಸಲಿ ಬಣ್ಣ ಬಯಲಾಗಿದೆ. ಮೊಬೈಲ್‌ನಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ಫೋಟೋ ಮತ್ತು ವಿಡಿಯೋಗಳಿದ್ದವು. ಇವುಗಳನ್ನು ಇಟ್ಟುಕೊಂಡು ಮಹಿಳೆಯರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ದೂರು ನೀಡಿದ ಮಹಿಳೆಯಿಂದಲೇ ಈತ ಸುಮಾರು 5 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ.
ಆರೋಪಿಯ ವಿಚಿತ್ರ ವಂಚನೆ ಜಾಲ:
ದಾಖಲೆ ತಿದ್ದುಪಡಿ: ಸಂತ್ರಸ್ತೆಯ ಮಗಳ ಶಾಲಾ ದಾಖಲೆಗಳಲ್ಲಿ ತನ್ನ ಹೆಸರನ್ನೇ ತಂದೆಯ ಸ್ಥಾನಕ್ಕೆ ಸೇರಿಸಲು ಪ್ರಯತ್ನಿಸಿದ್ದ.
ನಕಲಿ ಗಂಡ: ಮನೆಯ ಕರಾರು ಪತ್ರದಲ್ಲಿ ತಾನೇ ಗಂಡ ಎಂದು ಬಿಂಬಿಸಿಕೊಂಡಿದ್ದ.
ತಾಯಿಯ ಬಳಕೆ: ತನ್ನ ತಾಯಿಯನ್ನು ಸಂತ್ರಸ್ತೆಯ ಮನೆಯಲ್ಲೇ ಬಿಟ್ಟು ವರ್ಷಗಟ್ಟಲೆ ಸೇವೆ ಮಾಡಿಸಿಕೊಂಡಿದ್ದ.
ಮಹಿಳೆಯ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಹನಿ ಟ್ರ್ಯಾಪ್ ಪ್ರಕರಣದಡಿ ಚಂದ್ರೇಗೌಡನನ್ನು ಬಂಧಿಸಿದ್ದಾರೆ.ಆರೋಪಿಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದು, ಅದರಲ್ಲಿರುವ ಸಾಕ್ಷ್ಯಗಳು ಕಂಡು ಪೊಲೀಸರೇ ದಂಗಾಗಿದ್ದಾರೆ. ಈತ ಸಿನಿಮಾ ಒಂದರಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದನಂತೆ. ಅದೇ ಫೋಟೋ ಇಟ್ಕೊಂಡು ಮಹಿಳೆಯರಿಗೆ ತಾನೊಬ್ಬ ಪೊಲೀಸ್ ಅಂತಾ ನಂಬಿಸಿ ಮೋಸ ಮಾಡಿದ್ದಾನೆ. ಸದ್ಯ ಈತನಿಂದ ಇನ್ಯಾರಾದರೂ ವಂಚನೆಗೆ ಒಳಗಾಗಿದ್ದಾರಾ ಅನ್ನೋ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.ಒಟ್ಟಿನಲ್ಲಿ ಮಕ್ಕಳ ರಕ್ಷಣೆ ಮಾಡಬೇಕಾದವರೇ ಮಹಿಳೆಯರ ಶೋಷಣೆಗೆ ಇಳಿದಿರೋದು ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ