ಹೈದರಾಬಾದ್‌ನಲ್ಲಿ ನಡೆದ ಸಾಫ್ಟ್‌ವೇರ್ ಇಂಜಿನಿಯರ್ ಸೀತಾರಾಂ ಅವರ ಆತ್ಮಹತ್ಯೆ ಪ್ರಕರಣವು ದಾಂಪತ್ಯ ದ್ರೋಹದ ಕರಾಳ ಮುಖವನ್ನು ಅನಾವರಣಗೊಳಿಸಿದೆ. ಪತ್ನಿಯ ಅಕ್ರಮ ಸಂಬಂಧಗಳಿಂದ ಬೇಸತ್ತು ಆತ ಕೆರೆಗೆ ಜಿಗಿದು ಪ್ರಾಣಬಿಟ್ಟಿದ್ದು, ಇದೀಗ ಪ್ರಕರಣದ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ.
2018ರಲ್ಲಿ ವಿವಾಹವಾಗಿದ್ದ ಸೀತಾರಾಂ ಮತ್ತು ರೇಣುಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ರೇಣುಕಾ ಮೂವರು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ವೈರಲ್ ಆದ ಖಾಸಗಿ ವಿಡಿಯೋ:
ಪತ್ನಿ ತನ್ನ ಪ್ರಿಯಕರನೊಂದಿಗೆ ಇದ್ದ ಖಾಸಗಿ ವಿಡಿಯೋಗಳನ್ನು ಪ್ರಿಯಕರ ರಮಣ ಎಂಬಾತ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟಿದ್ದ. ಇದನ್ನು ನೋಡಿದ ಸೀತಾರಾಂ ಸಂಪೂರ್ಣವಾಗಿ ಕುಸಿದುಹೋಗಿದ್ದರು.

19 ಪುಟಗಳ ಕಣ್ಣೀರಿನ ಡೆತ್ ನೋಟ್:
“ನನ್ನ ಹೆಂಡತಿಗೆ ಏನು ಬೇಕಿತ್ತು? ಪ್ರೀತಿಯೋ, ಕಾಮವೋ? ಒಂದೂವರೆ ವರ್ಷದಲ್ಲಿ ಮೂವರನ್ನು ಬದಲಾಯಿಸಿದಳು. ಆ ವಿಡಿಯೋ ನೋಡಿದ ಮೇಲೆ ನಾನು ಬದುಕುವುದಾದರೂ ಹೇಗೆ? ಯಾವ ಹೆಣ್ಣೂ ಕೂಡ ಇಂತಹ ದ್ರೋಹವನ್ನು ಮಾಡಬೇಡಿ” ಎಂದು ತಮ್ಮ 19 ಪುಟಗಳ ಡೆತ್ ನೋಟ್‌ನಲ್ಲಿ ಸೀತಾರಾಂ ನೋವು ತೋಡಿಕೊಂಡಿದ್ದಾರೆ.
ಸೀತಾರಾಂ ಪೋಷಕರ ದೂರಿನ ಮೇರೆಗೆ ತನಿಖೆ ನಡೆಸಿದ ಹೈದರಾಬಾದ್ ಪೊಲೀಸರು, ಡೆತ್ ನೋಟ್ ಆಧಾರದ ಮೇಲೆ ಇದೀಗ ಪತ್ನಿ ರೇಣುಕಾ ಹಾಗೂ ಅವಳ ಇಬ್ಬರು ಪ್ರಿಯಕರರಾದ ರಮಣಾ ರೆಡ್ಡಿ ಮತ್ತು ಶ್ರವಣ್ ಎಂಬುವವರನ್ನು ಬಂಧಿಸಿದ್ದಾರೆ.
ಒಂದು ಸುಂದರ ಕುಟುಂಬ ಇಂದು ನಂಬಿಕೆ ದ್ರೋಹಕ್ಕೆ ಬಲಿಯಾಗಿ, ಇಬ್ಬರು ಕಂದಮ್ಮಗಳು ಅನಾಥವಾಗಿರುವುದು ನಿಜಕ್ಕೂ ದುರಂತ. ಸೀತಾರಾಂ ಅವರ ಕುಟುಂಬಕ್ಕೆ ನ್ಯಾಯ ಸಿಗಲಿ.