ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಹಿಡಿತ ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿಯ ಶ್ರೀನಿವಾಸ ದಾಸಕರಿಯಪ್ಪ ಅವರನ್ನು 4873 ಮತಗಳ ಅಂತರದಿಂದ ಸೋಲಿಸುವ ಮೂಲಕ ಸಮರ್ಥ್ ಶಾಮನೂರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಯುವ ನಾಯಕನಿಗೆ ಒಲಿದ ಜಯ:
ಆರಂಭಿಕ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸಮರ್ಥ್ ಶಾಮನೂರು ಅವರಿಗೆ ಕ್ಷೇತ್ರದ ಮತದಾರರು ಭರ್ಜರಿ ಬೆಂಬಲ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಾಗಿರುವ ಸಮರ್ಥ್, ಯುವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಕ್ಷೇತ್ರದ ಅಭಿವೃದ್ಧಿ ಮತ್ತು ಕುಟುಂಬದ ವರ್ಚಸ್ಸು ಇವರ ಗೆಲುವಿಗೆ ಪ್ರಮುಖ ಕಾರಣವಾಯಿತು.ಸಮರ್ಥ್ ಅವರು ಒಟ್ಟು 68619 ಮತಗಳನ್ನ ಪಡೆದು ಜಯಭೇರಿ ಬಾರಿಸಿದ್ದಾರೆ.
ಬಿಜೆಪಿಗೆ ಮುಖಭಂಗ:
ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀನಿವಾಸ ದಾಸಕರಿಯಪ್ಪ ಅವರು ಸಮರ್ಥ್ ಶಾಮನೂರು ಅವರಿಗೆ ತೀವ್ರ ಪೈಪೋಟಿ ನೀಡಲು ವಿಫಲರಾದರು. ಮೂರು ನಾಲ್ಕು ಸುತ್ತುಗಳಲ್ಲಿ ಕಡಿಮೆ ಅಂತರ ಮುನ್ನಡೆ ಸಾಧಿಸಿದರೂ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಾ ಹೋಗಿದ್ದು ಶ್ರೀನಿವಾಸ ದಾಸಕರಿಯಪ್ಪ ಅವರ ಸೋಲಿಗೆ ಕಾರಣವಾಯಿತು. ಚುನಾವಣಾ ಆಯೋಗವು ಸಮರ್ಥ್ ಶಾಮನೂರು ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವನ್ನ ಸಾಧಿಸುತ್ತದೆ ಎಂದು ಪ್ರಮುಖ ನಾಯಕರು ವಿಶ್ವಾಸ ಇಟ್ಟುಕೊಂಡಿದ್ದರು.ಹಾವು ಏಣಿ ತರ ಹಿನ್ನಡೆ-ಮುನ್ನಡೆ ಫಲಿತಾಂಶ ಬರುತ್ತಿದ್ದನ್ನ ಕಂಡ ಬಿಜೆಪಿಯವರು ಕೊನೆಗೆ ಅಭ್ಯಾರ್ಥಿ ಸೋಲುವ ಮೂಲಕ ತುಂಬಾನೆ ಹತಾಶರಾದರು.
ವಿಜಯೋತ್ಸವ:
ಸಮರ್ಥ್ ಅವರ ಗೆಲುವು ಖಚಿತವಾಗುತ್ತಿದ್ದಂತೆ ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. “ಶಾಮನೂರು ಕುಟುಂಬಕ್ಕೆ ಜಯವಾಗಲಿ” ಎಂಬ ಘೋಷಣೆಗಳೊಂದಿಗೆ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.