ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿದೆ. ಸಂಸಾರ, ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಲಿವ್-ಇನ್‌ನಲ್ಲಿದ್ದ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ದುರ್ದೈವಿ. ಈತ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ದಾವಣಗೆರೆ ಮೂಲದ ಮಹಿಳೆಯ ಪರಿಚಯವಾಗಿತ್ತು. ಆಕೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಇನ್‌ಸ್ಟಾಗ್ರಾಮ್ ಪ್ರೇಮದ ಅಮಲಿನಲ್ಲಿ ಪತಿ ಮತ್ತು ಮಕ್ಕಳನ್ನು ತೊರೆದು ತಿಪ್ಪೇಸ್ವಾಮಿ ಜೊತೆ ಬೆಂಗಳೂರಿಗೆ ಬಂದಿದ್ದಳು.
ಕಳೆದ ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ ಈ ಜೋಡಿ, ತಾವು ಗಂಡ-ಹೆಂಡತಿ ಎಂದು ನಂಬಿಸಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ, ಸುಂದರವಾಗಿದ್ದ ಈ ಸಂಬಂಧದಲ್ಲಿ ಕೆಲವೇ ದಿನಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.
ಪತಿ-ಮಕ್ಕಳನ್ನು ಬಿಟ್ಟು ಬಂದಿದ್ದ ಮಹಿಳೆ, ಇತ್ತೀಚೆಗೆ ತಿಪ್ಪೇಸ್ವಾಮಿಗೆ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದಳಂತೆ. “ನಿನ್ನಿಂದ ನನ್ನ ಮೆಂಟೇನೆನ್ಸ್ (ಖರ್ಚು) ಭರಿಸಲು ಸಾಧ್ಯವಿಲ್ಲ, ನನ್ನನ್ನು ಬಿಟ್ಟುಬಿಡು” ಎಂದು ಆಕೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ.
ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಗಾಬರಿಯಾದ ಮಹಿಳೆ ನಾಪತ್ತೆಯಾಗಿದ್ದಾಳೆ. ಮಗನ ಸಾವಿಗೆ ಈ ಮಹಿಳೆಯೇ ಕಾರಣ ಎಂದು ತಿಪ್ಪೇಸ್ವಾಮಿ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕ್ಷಣಿಕ ಸುಖದ ಪ್ರೀತಿ ಮತ್ತು ಸೋಶಿಯಲ್ ಮೀಡಿಯಾ ಮೋಹದ ಹಿಂದೆ ಬಿದ್ದಾಗ ಸುಂದರ ಬದುಕುಗಳು ಹೇಗೆ ಹಳಿ ತಪ್ಪುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.