ಇನ್‌ಸ್ಟಾಗ್ರಾಮ್ ರೀಲ್ಸ್ ಪರಿಚಯ, 14ರ ಬಾಲಕನ ಪ್ರೀತಿಯಲ್ಲಿ ಬಿದ್ದ 4 ಮಕ್ಕಳ ತಾಯಿ! ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣ ನಡೆದಿದೆ.
“ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ” ಎನ್ನುವ ಮಾತನ್ನು ನೀವು ಕೇಳಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಪರಿಚಯವಾದ 14 ವರ್ಷದ ಅಪ್ರಾಪ್ತ ಬಾಲಕನನ್ನು, 40 ವರ್ಷದ ನಾಲ್ಕು ಮಕ್ಕಳ ತಾಯಿಯೊಬ್ಬಳು ಪ್ರೀತಿಸಿ, ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಅಚ್ಚರಿಯ ವಿಷಯವೆಂದರೆ, ಈ ಮಹಿಳೆಯ ಹಿರಿಯ ಮಗನಿಗೆ ಈಗ 19 ವರ್ಷ! ಅಂದರೆ ತನ್ನ ಸ್ವಂತ ಮಗನಿಗಿಂತಲೂ 5 ವರ್ಷ ಚಿಕ್ಕವನಾದ ಬಾಲಕನ ಬೆನ್ನು ಬಿದ್ದು ಈಕೆ ಸುದ್ದಿಯಾಗಿದ್ದಾಳೆ.
ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಶುರುವಾದ ಲವ್ ಸ್ಟೋರಿ:
ಮೂಲತಃ ಉತ್ತರ ಪ್ರದೇಶದ ಗೋರಾಖ್‌ಪುರದ ಈ ಮಹಿಳೆಗೆ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಲೈಕ್ ಮಾಡುವ ಮೂಲಕ ತಮಿಳುನಾಡಿನ ಚೆನ್ನೈ ಮೂಲದ 14 ವರ್ಷದ ಬಾಲಕನ ಪರಿಚಯವಾಗಿದೆ. ದಿನಕಳೆದಂತೆ ಇಬ್ಬರ ನಡುವೆ ಚಾಟಿಂಗ್ ಹೆಚ್ಚಾಗಿ, ಇಬ್ಬರೂ ಹತ್ತಿರವಾಗಿದ್ದಾರೆ. ಬಾಲಕ ಪ್ರಸ್ತುತ ತನ್ನ ತಂದೆಯೊಂದಿಗೆ ವಾಸವಾಗಿದ್ದಾನೆ.
ಕೆಲ ದಿನಗಳ ಬಳಿಕ ಬಾಲಕ ಮಹಿಳೆಯ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ, ಆಕೆಯನ್ನು ನಿರ್ಲಕ್ಷಿಸಲು ಆರಂಭಿಸಿದ್ದಾನೆ. ಇದರಿಂದ ಕಂಗಾಲಾದ ಮಹಿಳೆ ನೇರವಾಗಿ ನೌತನವಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. “ನಮಗೆ ಈಗಾಗಲೇ ಮದುವೆಯಾಗಿದೆ, ಆದರೆ ಆತ ಈಗ ನನ್ನೊಂದಿಗೆ ಇರಲು ನಿರಾಕರಿಸುತ್ತಿದ್ದಾನೆ” ಎಂದು ಪೊಲೀಸರ ಮುಂದೆ ನಾಟಕವಾಡಿದ್ದಾಳೆ.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಬಾಲಕ ಮತ್ತು ಮಹಿಳೆಯ ಇಬ್ಬರ ಕಡೆಯವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಮದುವೆಯಾಗಿರುವ ಯಾವುದೇ ದಾಖಲೆಗಳನ್ನು ಒದಗಿಸಲು ಮಹಿಳೆ ವಿಫಲಳಾಗಿದ್ದಾಳೆ.
ಅಪ್ರಾಪ್ತ ಬಾಲಕನೊಂದಿಗೆ ವಾಸಿಸಲು ಒತ್ತಾಯಿಸಿದರೆ ಪೋಕ್ಸೋ (POCSO) ಕಾಯ್ದೆಯಡಿ ಜೈಲು ಶಿಕ್ಷೆಯಾಗಬಹುದು ಎಂದು ಪೊಲೀಸರು ಎಚ್ಚರಿಸಿದಾಗ ಮಹಿಳೆ ಸುಮ್ಮನಾಗಿದ್ದಾಳೆ.
ಸದ್ಯ ಇಬ್ಬರ ಕಡೆಯಿಂದಲೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. “ಇನ್ಮುಂದೆ ಪರಸ್ಪರ ಯಾವುದೇ ಸಂಪರ್ಕ ಹೊಂದುವಂತಿಲ್ಲ” ಎಂದು ಪೊಲೀಸರು ಇಬ್ಬರಿಗೂ ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸೋಶಿಯಲ್ ಮೀಡಿಯಾ ಪ್ರೀತಿಯ ಈ ವಿಚಿತ್ರ ಕಥೆ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.