ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಸಭೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸಮಗ್ರ ರಸ್ತೆ ಅಭಿವೃದ್ಧಿ, ಮಳೆನೀರು ಕಾಲುವೆ ಹೂಳೆತ್ತುವುದು, ಜಂಕ್ಷನ್ ಅಭಿವೃದ್ಧಿ, ರಸ್ತೆ ಪುನಃಸ್ಥಾಪನೆ, ಕಟ್ಟಡ ಸುರಕ್ಷತೆ, ಸಕಾಲ ದೂರುಗಳ ವಿಲೇವಾರಿ ಇನ್ನಿತರೆ ಕಾಮಗಾರಿ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.

*ಸಿಎಂಐಡಿಪಿ ಮತ್ತು ಎಸ್‌ಎಸ್‌ಐಪಿ ಕಾಮಗಾರಿಗಳ ಡಾಂಬರೀಕರಣ ಪೂರ್ಣಗೊಳಿಸಿ*
ಸಿಎಂಐಡಿಪಿ (CMIDP) ಮತ್ತು ಎಸ್‌ಎಸ್‌ಐಪಿ (SSIP) ಯೋಜನೆಗಳಡಿ ಕೈಗೊಂಡಿರುವ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪೈಕಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿರುವ ಪ್ಯಾಕೇಜುಗಳಲ್ಲಿನ ರಸ್ತೆಗಳನ್ನು ಜೂನ್ 9ರೊಳಗೆ ಡಾಂಬರೀಕರಣ ಮಾಡುವಂತೆ ಹಾಗೂ ಇನ್ನುಳಿದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ನಿರ್ದೇಶನ ನೀಡಿದರು.
*ಸುರಕ್ಷಾ-75 ಯೋಜನೆಯಡಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ*
ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಸುರಕ್ಷಾ-75 ಯೋಜನೆ ಅಡಿಯಲ್ಲಿ ಪ್ರಸ್ತಾಪಿತ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳ ವಿನ್ಯಾಸಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಿ, ಕಾಮಗಾರಿಗಳ ಅನುಷ್ಠಾನವನ್ನು ವಿಳಂಬವಿಲ್ಲದೆ ಆರಂಭಿಸುವಂತೆ ಮುಖ್ಯ ಅಭಿಯಂತರಿಗೆ ಸೂಚಿಸಿದರು.

*ಎಎಂಸಿ ಮೂಲಕ ಮಳೆ ನೀರು ಕಾಲುವೆಗಳ ಸಮರ್ಪಕ ನಿರ್ವಹಣೆ*
ಪಾಲಿಕೆ ವ್ಯಾಪ್ತಿಯ ಕಾಂಕ್ರೀಟ್ ಮತ್ತು ಕಚ್ಚಾ ಮಳೆ ನೀರು ಕಾಲುವೆಗಳ ಹೂಳು ತೆರವು ಕಾಮಗಾರಿಗಳನ್ನು ಎಎಂಸಿ ಮೂಲಕ ತುರ್ತಾಗಿ ಕೈಗೊಳ್ಳುವಂತೆ, ಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳು, ಕಸ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಳೆಗಿಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಕಾಲುವೆಗಳಲ್ಲಿ ಮಳೆ ನೀರು ಹರಿಯುವ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಆಯುಕ್ತರು ನಿರ್ದೇಶನ ನೀಡಿದರು.
*ಟ್ರಾಫಿಕ್ ಪೊಲೀಸ್ ಗುರುತಿಸಿರುವ ಚೋಕ್ ಪಾಯಿಂಟ್‌ಗಳಲ್ಲಿ ತುರ್ತು ಕ್ರಮ*
ಮಳೆಗಾಲದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗುತ್ತಿರುವ ಪ್ರದೇಶಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದು, ಅಂತಹ ಎಲ್ಲಾ ಚೋಕ್ ಪಾಯಿಂಟ್‌ಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಆದ್ಯತೆ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

*ಕತ್ತರಿಸಿರುವ ರಸ್ತೆ ಪುನಃಸ್ಥಾಪನೆ ಕಾಮಗಾರಿ ಕೈಗೊಳ್ಳಿ*
ವಿವಿಧ ನಾಗರಿಕ ಸೇವಾ ಪೂರೈಕೆದಾರ ಸಂಸ್ಥೆಗಳು ರಸ್ತೆ ಕಟ್ ಮಾಡಿರುವ ಸ್ಥಳಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ರಸ್ತೆ ಪುನಃಸ್ಥಾಪನೆ ಕಾಮಗಾರಿಗಳನ್ನು ನಗರ ಪಾಲಿಕೆಯಿಂದ ಕೈಗೊಳ್ಳುವಂತೆ ಸೂಚಿಸಿದರು. ಈ ಕಾಮಗಾರಿಗಳಿಗೆ ತಗಲುವ ವೆಚ್ಚವನ್ನು ಸಂಬಂಧಿತ ಸಂಸ್ಥೆಗಳಿಂದ ಬೇಡಿಕೆ ನೋಟಿಸ್ ಮೂಲಕ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ರಸ್ತೆಗುಂಡಿ ಮುಚ್ಚುವ ಕಾಮಗಾರಿಗೆ ಕಾರ್ಯಯೋಜನೆ ರೂಪಿಸಿ*
ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಉಂಟಾಗಿರುವ ಹಾಗೂ ಉಂಟಾಗಬಹುದಾದ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ ಆಯುಕ್ತರು, ಅಗತ್ಯ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

*ಎನ್‌ಬಿಸಿ ನಿಯಮ ಉಲ್ಲಂಘಿಸಿರುವ ಕಾಂಪೌಂಡ್ ಗೋಡೆಗಳಿಗೆ ನೋಟಿಸ್ ನೀಡಿ*
ರಾಷ್ಟ್ರೀಯ ಕಟ್ಟಡ ಸಂಹಿತೆ ನಿಯಮಗಳ ಪ್ರಕಾರ ಅನುಮತಿಸಲಾದ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ಶಿಥಿಲಾವಸ್ಥೆಯ ಕಟ್ಟಡಗಳ ವಿರುದ್ಧ ತಕ್ಷಣ ಕ್ರಮ*
ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟುಮಾಡುವ ಶಿಥಿಲಾವಸ್ಥೆಯ ಹಾಗೂ ಅಪಾಯಕಾರಿ ಕಟ್ಟಡಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ಅವುಗಳನ್ನು ತೆರವುಗೊಳಿಸುವಂತೆ ಆಯುಕ್ತರು ಸೂಚಿಸಿದರು. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವಾರದ ಪ್ರಗತಿ ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದರು.
*ಸಹಾಯ ವೇದಿಕೆಯ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ*
ಸಹಾಯ ಆಪ್ ನಲ್ಲಿ ಸ್ವೀಕರಿಸಲಾಗಿರುವ ಎಲ್ಲಾ ಬಾಕಿ ದೂರುಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರಿಂದ ಬಂದಿರುವ ದೂರುಗಳಿಗೆ ಸ್ಪಂದನಾತ್ಮಕ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
*ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಮಗ್ರ ಸ್ವಚ್ಛತಾ ಕಾರ್ಯಕ್ಕೆ ಕ್ರಿಯಾ ಯೋಜನೆ*
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಲಯಕ್ಕೆ ಒಂದರಂತೆ 2 ವಾರ್ಡ ಗಳಲ್ಲಿ ಎಲ್ಲಾ ಪೌರ ಕಾರ್ಮಿಕರು, ಗ್ಯಾಂಗ್ ಮ್ಯಾನ್ , ಆಟೋ ಟಿಪ್ಪರ್, ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಂಡು ಸಂಪೂರ್ಣ ವಾರ್ಡನ್ನು ಸ್ವಚ್ಛಗೊಳಿಸಲು, ಸರ್ಕಾರಿ ಕಟ್ಟಡಗಳನ್ನು ಬಣ್ಣ ಬಳಿಯುವ ಮೂಲಕ ಸಿಂಗರಿಸಲು ಒಟ್ಟಾರೆಯಾಗಿ ಸಮಗ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
*ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ*
ಮಳೆಗಾಲದ ಪೂರ್ವಸಿದ್ಧತೆ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಸುಧಾರಣೆ ಸಂಬಂಧ ಕೈಗೊಳ್ಳಲಾಗುತ್ತಿರುವ ಎಲ್ಲಾ ಕಾಮಗಾರಿಗಳ ಪ್ರಗತಿಯನ್ನು ಹಿರಿಯ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡಿ, ಯಾವುದೇ ವಿಳಂಬವಾಗದಂತೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರು ಎಂ ಲೋಕೇಶ್, ಉಪ ಆಯುಕ್ತರಾದ ಶಶಿಕುಮಾರ್ ಮತ್ತು ಮುರಳೀಧರ, ಆರೋಗ್ಯಾಧಿಕಾರಿ ಡಾ. ಸವಿತಾ, ಎಲ್ಲಾ ವಿಭಾಗೀಯ ಕಾರ್ಯಪಾಲಕ ಅಭಿಯಂತರರು, ಆರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.