ದೊಡ್ಡಬಳ್ಳಾಪುರ: ಡಿವೈಎಸ್‌ಪಿ ಉಪವಿಭಾಗ ವ್ಯಾಪ್ತಿಯಲ್ಲಿನ 45ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದರು.
ಡಿವೈಎಸ್‌ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ಹೊಸಹಳ್ಳಿ, ದೊಡ್ಡಬೆಳವಂಗಲ, ವಿಶ್ವನಾಥಪುರ, ಚೆನ್ನರಾಯಪಟ್ಟಣ ಹಾಗೂ ವಿಜಯಪುರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಕ್ರಿಯ ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಆಯುಧಗಳು ಹಾಗೂ ಅಪರಾಧ ಚಟುವಟಿಕೆಗಳಿಗೆ ಬಳಸುವ ವಸ್ತುಗಳಿಗಾಗಿ ಶೋಧ ನಡೆಸಲಾಯಿತು.
ತಪಾಸಣೆ ವೇಳೆ ಯಾವುದೇ ಮನೆಗಳಲ್ಲಿ ಆಯುಧಗಳು ಅಥವಾ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.