Saturday, July 11, 2026
Home ಬೆಂಗಳೂರು ನಗರನೀಟ್ ಪೇಪರ್ ಲೀಕ್: ಮಹದೇವಪುರದಲ್ಲಿ ಯುವ ಕಾಂಗ್ರೆಸ್‌ನಿಂದ ಬೃಹತ್ ಪಂಜಿನ ಮೆರವಣಿಗೆ.

ನೀಟ್ ಪೇಪರ್ ಲೀಕ್: ಮಹದೇವಪುರದಲ್ಲಿ ಯುವ ಕಾಂಗ್ರೆಸ್‌ನಿಂದ ಬೃಹತ್ ಪಂಜಿನ ಮೆರವಣಿಗೆ.

by Dharmaraju
0 comments

ಮಹದೇವಪುರ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕೆಂದು ಆಗ್ರಹಿಸಿ ಮಹದೇವಪುರ ಕ್ಷೇತ್ರದ ಕನ್ನಮಂಗಲದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪಂಜಿನ ಮೆರವಣಿಗೆಯನ್ನು ನಡೆಸಿ ತೀವ್ರ ಪ್ರತಿಭಟನೆ ನಡೆಸಿದರು.


ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಯಾದವ್ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ನೂರಾರು ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ದೇಶದ ಶಿಕ್ಷಣ ವ್ಯವಸ್ಥೆ ಹೊಣೆಗಾರಿಕೆ ಹೊಂದಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಕೆಪಿವೈಸಿಸಿ) ವತಿಯಿಂದ ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ‌ ಧ್ವನಿ) ಅಭಿಯಾನದ ಎರಡನೇ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.

ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮಾಸ್ಕ್(ಮುಖವಾಡ) ಧರಿಸಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸುವ ಫಲಕ (ಪ್ಲಕಾರ್ಡ್) ಹಾಗೂ ಪಂಜನ್ನು ಹಿಡಿದು, ಪಾರದರ್ಶಕ ಶಿಕ್ಷಣ, ವ್ಯವಸ್ಥೆಯ ಉತ್ತರದಾಯಿತ್ವ ಹಾಗೂ ಸೋರಿಕೆ, ಅಕ್ರಮ ರಹಿತ ಪರೀಕ್ಷೆಗಳಿಗಾಗಿ ಮೆರವಣಿಗೆ ಸಾಗಿದರು.

ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, ಅಸಮರ್ಥ ಕೇಂದ್ರ ಶಿಕ್ಷಣ ಸಚಿವ ಹಾಗೂ ಎನ್ ಟಿ ಎ ಎಂಬ ಭ್ರಷ್ಟರ ಕೂಪದಿಂದ ಇಂದು ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳುತ್ತಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಭವಿಷ್ಯದಲ್ಲಿ ಯಾವುದೇ ವಿದ್ಯಾರ್ಥಿಯೂ ವ್ಯವಸ್ಥೆಯ ಲೋಪದಿಂದ ಸಾಯಬಾರದು. ಲೋಪಮುಕ್ತ ವ್ಯವಸ್ಥೆ ಜಾರಿಗೊಳಿಸುವುದು ಪ್ರತೀ ನಾಗರಿಕನ ಕರ್ತವ್ಯವಾ
ಗಿದ್ದು, ಪಾರದರ್ಶಕ ಶಿಕ್ಷಣ ವ್ಯವಸ್ಥೆಗಾಗಿನ ನಮ್ಮ ಹೋರಾಟ ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಹುಟ್ಟುಹಾಕಲಿದೆ ಎಂದು ಭರವಸೆ ನೀಡಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಬೇಕು. ಎನ್‌ಟಿಎ ವ್ಯವಸ್ಥೆಯ ವಿರುದ್ಧ ಸಮಗ್ರ ತನಿಖೆ ಮತ್ತು ಸುಧಾರಣೆ ಆಗಬೇಕು. ಪರೀಕ್ಷೆಗಳು, ಫಲಿತಾಂಶಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಸಿದ್ಧಪಡಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬುದು ನಮ್ಮ ಅಭಿಯಾನದ ಪ್ರಮುಖ ಬೇಡಿಕೆಗಳಾಗಿದ್ದು, ಇವುಗಳು ಈಡೇರುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.

ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ,
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶದ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದೆ. ಈ ಹಗರಣದಿಂದಾಗಿ ದೇಶದ ಉನ್ನತ ಪರೀಕ್ಷಾ ವ್ಯವಸ್ಥೆಯ ಮೇಲಿದ್ದ ನಂಬಿಕೆಯೇ ಸಂಪೂರ್ಣವಾಗಿ ಕುಸಿದುಹೋಗಿದೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದರು.

ಕರ್ನಾಟಕದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ಈ ಪರೀಕ್ಷೆ ಬರೆದಿದ್ದರು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ, ಪ್ರಯಾಣ ಸೇರಿದಂತೆ ಸಾಕಷ್ಟು ಖರ್ಚುಗಳನ್ನು ಮಾಡಿದ್ದರು. ಆದರೆ, ಕೇಂದ್ರದ ಒಂದು ನಿರ್ಧಾರ ಇಡೀ ವಿದ್ಯಾರ್ಥಿ ಸಮುದಾಯವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ತಿಳಿಸಿದರು.

ಹೊಣೆ ಹೊರಬೇಕಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಯುವಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ , ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ಕೂಗಿದರು. ಮಾಜಿ ಸಂಸದ ರಾಜೀವ್ ಗೌಡ, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಮೋಹನ್,  ಮಾಜಿ‌ ಶಾಸಕರಾದ ಎಚ್. ನಾಗೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್, ಕೆಪಿಸಿಸಿ ಸದಸ್ಯರಾದ ಜಯರಾಮ್ ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ಉದಯಕುಮಾರ್, ಗುಂಜುರು ರಾಮಕೃಷ್ಣಪ್ಪ,
ಕೃಷ್ಣರೆಡ್ಡಿ,ಚಂದ್ರಾರೆಡ್ಡಿ, ಬಾಬುಗೌಡ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ರೆಡ್ಡಿ, ಯುವ ಮುಖಂಡರಾದ ಜಾಯ್ಸನ್ ಬಾಲರಾಜ್ ಪಟೇಲ್, ಭರತ್ ಯಾದವ್, ನದೀಂ ಅಕ್ರಂ, ಟಿಪ್ಪು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

You may also like

Leave a Comment