ವೈಟ್ ಫೀಲ್ಡ್: ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯ ತಜ್ಞ ವೈದ್ಯರ ತಂಡವು 48 ವರ್ಷದ ಮಹಿಳೆಯೊಬ್ಬರಿಗೆ ಮೂತ್ರಪಿಂಡದ ಕ್ಯಾನ್ಸರ್ (Renal Cell Carcinoma) ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳ ನಡುವೆಯೂ ಅತ್ಯಾಧುನಿಕ ಮಿನಿಮಲಿ ಇನ್ವೇಸಿವ್ ರ್ಯಾಡಿಕಲ್ ನೆಫ್ರೆಕ್ಟಮಿ (Keyhole Radical Nephrectomy) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ರೋಗಿಗೆ ಹೊಸ ಜೀವನ ನೀಡಿದೆ.

ರೋಗಿಯು ಹಲವು ತಿಂಗಳುಗಳಿಂದ ಮೂತ್ರದಲ್ಲಿ ರಕ್ತಸ್ರಾವ (Chronic Hematuria), ಕುತ್ತಿಗೆಯಲ್ಲಿ ಗಡ್ಡೆ, ಅಧಿಕ ರಕ್ತದೊತ್ತಡ, ತೀವ್ರ ರಕ್ತಹೀನತೆ ಹಾಗೂ ಹೊಟ್ಟೆ ಭಾಗದಲ್ಲಿ ನೋವಿನಿಂದ ಬಳಲುತ್ತಿದ್ದರು. ಪರೀಕ್ಷೆಗಳ ವೇಳೆ ಎಡ ಮೂತ್ರಪಿಂಡದಲ್ಲಿ ಸುಮಾರು 7 ಸೆಂ.ಮೀ. ಗಾತ್ರದ ಗಡ್ಡೆ ಪತ್ತೆಯಾಗಿದ್ದು, ಅದು ರೆನಲ್ ಸೆಲ್ ಕಾರ್ಸಿನೋಮಾ (ಮೂತ್ರಪಿಂಡದ ಕ್ಯಾನ್ಸರ್) ಎಂದು ದೃಢಪಟ್ಟಿತು. ಜೊತೆಗೆ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಡೈಲೇಟೆಡ್ ಕಾರ್ಡಿಯೋಮಯೋಪತಿ, ಬಲಭಾಗದ ಥೈರಾಯ್ಡ್ ಗಡ್ಡೆ ಹಾಗೂ ಗರ್ಭಾಶಯದ ಅಡಿನೋಮಿಯೋಸಿಸ್ ಸಮಸ್ಯೆಗಳೂ ಕಂಡುಬಂದಿದ್ದವು.
ಮೊದಲ ಹಂತದಲ್ಲಿ ರೋಗಿಯ ರಕ್ತದೊತ್ತಡ, ರಕ್ತಹೀನತೆ ಹಾಗೂ ಹೃದಯದ ಸ್ಥಿತಿಯನ್ನು ನಿಯಂತ್ರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೃದಯ ತಜ್ಞರು ಸೇರಿದಂತೆ ವಿವಿಧ ವಿಭಾಗಗಳ ವೈದ್ಯರ ಸಮನ್ವಯದೊಂದಿಗೆ ಶಸ್ತ್ರಚಿಕಿತ್ಸೆಗೆ ಸಿದ್ಧಗೊಳಿಸಿ, ಡಾ. ಪ್ರಮೋದ್ ಎಸ್. ಡಾ ಟಿ ಜೆ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಅತ್ಯಾಧುನಿಕ ಕೀಹೋಲ್ ತಂತ್ರಜ್ಞಾನ ಬಳಸಿ ಮೂತ್ರಪಿಂಡವನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು.
ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ಯಾವುದೇ ಗಂಭೀರ ತೊಂದರೆಗಳಿಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಕುರಿತು ಮಾತನಾಡಿದ ರೋಗಿ ಪಟ್ಚಿ ಪದ್ಮಜಾ ಮೆಡಿಕವರ್ ವೈದ್ಯರಿಂದ ಇಂದು ನನ್ನ ಜೀವ ಉಳಿದು ನಾನು ಮತ್ತು ನಮ್ಮ ಕುಟುಂಬ ನಿಮ್ಮ ಮುಂದೆ ಬಂದಿದ್ದೆವೆ. ಆಸ್ಪತ್ರೆಗೆ ಬಂದಾಗ ನಮ್ಮಲ್ಲಿ ತುಂಬಾ ಭಯದ ವಾತಾವರಣ ಇತ್ತು ಮತ್ತು ಆರ್ಥಿಕವಾಗಿಯೂ ನಾವು ಸದೃಢರಾಗಿರಲಿಲ್ಲ. ಆದರೆ ಇಲ್ಲಿರುವ ವೈದ್ಯರ ತಂಡ ಮತ್ತು ಆಡಳಿತ ಮಂಡಳಿ ನೀಡಿದ ಭರವಸೆಗೆ ಒಪ್ಪಿಕೊಂಡು ಚಿಕಿತ್ಸೆ ಪಡೆದು ಇಂದು ನಿಮ್ಮ ಮುಂದಿದ್ದೆವೆ ಎಂದು ಭಾವನಾತ್ಮಕವಾಗಿ ತಮ್ಮ ಮನದಾಳದ ಮಾತನಾಡಿದರು.
ಇನ್ನು ಈ ಕುರಿತು ಮಾತನಾಡಿದ ಡಾ. ಪ್ರಮೋದ್ ಎಸ್. ಯೂರಾಲಜಿಸ್ಟ್ ಮತ್ತು ರೋಬೋಟಿಕ್ ಸರ್ಜನ್, “ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಬೆನ್ನು ಅಥವಾ ಹೊಟ್ಟೆ ಭಾಗದಲ್ಲಿ ನಿರಂತರ ನೋವು, ಕಾರಣವಿಲ್ಲದೆ ತೂಕ ಇಳಿಯುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಆರಂಭಿಕ ಹಂತದಲ್ಲೇ ರೋಗ ಪತ್ತೆಯಾದರೆ ಅತ್ಯಾಧುನಿಕ ಕೀಹೋಲ್ ಅಥವಾ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಚಿಕಿತ್ಸೆ ನೀಡಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.
ಇನ್ನು ಮೆಡಿಕವರ ಆಸ್ಪತ್ರೆಯ ಮುಖ್ಯಸ್ಥರಾದ ಸಿದ್ದಾರೆಡ್ಡಿ ಮಾತನಾಡಿ ಮೆಡಿಕವರ್ ಆಸ್ಪತ್ರೆ ಅತ್ಯಾಧುನಿಕ ತಂತ್ರಜ್ಞಾನ, ಅನುಭವಿ ತಜ್ಞ ವೈದ್ಯರ ತಂಡ ಹಾಗೂ ಬಹುಶಾಖಾ ಚಿಕಿತ್ಸಾ ವ್ಯವಸ್ಥೆಯ ಮೂಲಕ ಸಂಕೀರ್ಣ ಮೂತ್ರಪಿಂಡದ ಕ್ಯಾನ್ಸರ್ ಪ್ರಕರಣಗಳಿಗೂ ಸಮಗ್ರ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡುತ್ತಿದೆ ಎಂದು ಹರ್ಷವ್ಯಕ್ತಪಡಿಸಿದರು.