ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ (Eye Witness) ಪುನೀತ್, ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿಯುವ ವೇಳೆ ತನ್ನ ಈ ಹಿಂದಿನ ಹೇಳಿಕೆಯಿಂದ ಸಂಪೂರ್ಣವಾಗಿ ಹಿಂದೆ ಸರಿದು ಉಲ್ಟಾ ಹೇಳಿಕೆ ನೀಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಗಳಾದ ಕಿರಣ್ ಹಾಗೂ ಪುನೀತ್ ಅವರಿಗೆ ಸಾಕ್ಷ್ಯ ನುಡಿಯುವಂತೆ ನಗರದ 59ನೇ ಸೆಷನ್ಸ್ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿತ್ತು. ಆದರೆ ಮಂಗಳವಾರ ನಡೆದ ವಿಚಾರಣೆಗೆ ಪುನೀತ್ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ (NBW) ಹೊರಡಿಸಿತ್ತು. ಈ ಬೆಳವಣಿಗೆಯ ನಂತರ ಆತ ಬುಧವಾರ 59ನೇ ಸಿಸಿಹೆಚ್ ಕೋರ್ಟ್ಗೆ ಖುದ್ದು ಹಾಜರಾಗಿದ್ದ.
ವಿಚಾರಣೆ ವೇಳೆ ಸಾಕ್ಷ್ಯ ನುಡಿದ ಪುನೀತ್, “ಹಲ್ಲೆ ನಡೆದ ಪಟ್ಟಣಗೆರೆ ಶೆಡ್ ಬಳಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಯಾವುದೇ ಆರೋಪಿಗಳು ಬಂದಿರಲಿಲ್ಲ. ನಾನಂತೂ ಘಟನಾ ಸ್ಥಳದಲ್ಲಿ ಅವರನ್ನು ನೋಡಿಯೇ ಇಲ್ಲ” ಎಂದು ಹೇಳುವ ಮೂಲಕ ತನಿಖಾಧಿಕಾರಿಗಳಿಗೆ ಭಾರಿ ಆಘಾತ ನೀಡಿದ್ದಾನೆ.
ತನಿಖೆಯ ಆರಂಭಿಕ ಹಂತದಲ್ಲಿ ಇದೇ ಪುನೀತ್ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಅಧಿಕೃತ ಹೇಳಿಕೆ ದಾಖಲಿಸಿದ್ದ. ಆಗ ಘಟನಾ ಸ್ಥಳದಲ್ಲಿ ಆರೋಪಿಗಳ ಉಪಸ್ಥಿತಿ ಹಾಗೂ ಕೃತ್ಯದ ವಿವರಗಳನ್ನು ವಿವರಿಸಿದ್ದ ಎನ್ನಲಾಗಿತ್ತು. ಆದರೆ ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಆತ ತನ್ನ ಹಳೆಯ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ‘ಪ್ರತಿಕೂಲ ಸಾಕ್ಷಿ’ (Hostile Witness) ಎಂದು ಪರಿಗಣಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕರು (SPP) ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.