ಡೀಸೆಲ್ ಬೆಲೆ ಏರಿಕೆಗೆ ವಿರೋಧ ಏ.14 ರಂದು ಲಾರಿ ಚಾಲಕರ ಮುಷ್ಕರ
ರಾಜ್ಯ


ಡೀಸೆಲ್ ಬೆಲೆ ಏರಿಕೆಗೆ ವಿರೋಧ ಏ.14 ರಂದು ಲಾರಿ ಚಾಲಕರ ಮುಷ್ಕರ
ಬೆಂಗಳೂರು: ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದು ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಣಾಮ ಡೀಸೆಲ್ ದರ ಏರಿಕೆ ಖಂಡಿಸಿ ಏಪ್ರಿಲ್ 14ರ ಮಧ್ಯರಾತ್ರಿಯಿಂದ ಲಾರಿ ಮಾಲೀಕರ ಸಂಘ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಏ.14ರ ಮಧ್ಯ ರಾತ್ರಿಯಿಂದ 5 ಲಕ್ಷ ಲಾರಿಗಳು ಸಂಚಾರ ನಿಲ್ಲಿಸಲಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಹಾಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ, ರಾಜ್ಯ ಸರ್ಕಾರ ಡೀಸೆಲ್ ಮೇಲಿನ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಆರ್ ಷಣ್ಮುಗಪ್ಪ ಆಗ್ರಹಿಸಿದ್ದಾರೆ.
ನಮ್ಮ ಹೋರಾಟ ಶುರುವಾದ ಬಳಿಕ ಯಾವುದೇ ರಾಜ್ಯದಿಂದ ಕರ್ನಾಟಕದೊಳಗೆ ವಾಣಿಜ್ಯ ವಾಹನ ಸಂಚಾರ ಮಾಡುವುದಿಲ್ಲ. ಚೆಕ್ ಪೋಸ್ಟ್‌ಗಳಲ್ಲಿ ವಾಣಿಜ್ಯ ವಾಹನಗಳನ್ನು ಒಳಗಡೆ ಬಿಡದಂತೆ ನೋಡಿಕೊಳ್ಳುತ್ತೇವೆ. ಎಲ್ಲ ಲಾರಿಗಳನ್ನು ಟೋಲ್ ಮತ್ತು ಹೈವೇಗಳಲ್ಲಿ ಬಿಟ್ಟು ಮುಷ್ಕರ ಮಾಡುತ್ತೇವೆ.
ಮುಷ್ಕರದ ದಿನ ಏರ್ ಪೋರ್ಟ್ ಟ್ಯಾಕ್ಸಿ, ಜಲ್ಲಿ ಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ ಸುಮಾರು ಆರು ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜೊತೆಗೆ ಅಕ್ಕಿ ಲೋಡ್, ಗೂಡ್ಸ್, ಪೆಟ್ರೋಲ್, ಡೀಸೆಲ್ ಸಾಗಾಟದ ಲಾರಿಗಳನ್ನೂ ಬಂದ್ ಮಾಡಲಾಗುತ್ತದೆ. ಇದಕ್ಕೆ ಚಾಲಕರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳು ಸೇರಿ ಸುಮಾರು 9 ಲಕ್ಷ ವಾಹನಗಳ ಸಂಚಾರ ಸ್ಥಗಿತವಾಗಲಿದೆ ಎಂದು ಜಿ.ಆರ್.ಷಣ್ಮುಗಪ್ಪ ವಿವರಿಸಿದರು.
ಬೇಡಿಕೆಗಳು..!
1. ಡೀಸೆಲ್ ದರ ಇಳಿಸುವುದು. 2. ಟೋಲ್ ದರ ಕಡಿಮೆ ಮಾಡುವುದು. 3. ಬಾರ್ಡರ್ ಚೆಕ್ ಪೋಸ್ಟ್ ತೆರವುಗೊಳಿಸುವುದು. 4. ಎಫ್‍ಸಿ ಶುಲ್ಕ ಇಳಿಕೆ ಮಾಡುವುದು.
ಏನಿರಲ್ಲ?
1. ಏರ್ ಪೋರ್ಟ್ ಟ್ಯಾಕ್ಸಿ ಬಂದ್ 2. ಜಲ್ಲಿ ಕಲ್ಲು, ಮರಳು ಲಾರಿ ಬಂದ್ 3. ಗೂಡ್ಸ್ ವಾಹನಗಳು ಬಂದ್ 4. ಸುಮಾರು ಐದಾರು ಲಕ್ಷ ಲಾರಿಗಳ ಬಂದ್ 5. ಅಕ್ಕಿ ಲೋಡ್, ಗೂಡ್ ಪೆಟ್ರೋಲ್, ಡಿಸೇಲ್ ಲಾರಿ ಬಂದ್ 6 ಹೊರ ರಾಜ್ಯದಿಂದಲೂ ವಾಹನ ಬರುವುದಿಲ್ಲ.