ಮಂಗಳೂರು: ಬಂಟ್ವಾಳ ರಹಿಮಾನ್ ಹತ್ಯೆ ಪ್ರಕರಣ: 15 ಮಂದಿ ವಿರುದ್ಧ ಪ್ರಕರಣ ದಾಖಲು.

ರಾಜ್ಯ

ಧರ್ಮ ಬಸವನಪುರ.

5/28/20251 min read

ಮಂಗಳೂರು: ಬಂಟ್ವಾಳದ ಕುರಿಯಾಳದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಮಂಗಳವಾರ ನಡೆದ ಪಿಕಪ್ ವಾಹನ ಚಾಲಕ ಅಬ್ದುಲ್ ರಹೀಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅಬ್ದುಲ್ ರಹಿಮಾನ್ ಅವರ‌ ಕೊಲೆ ಮತ್ತು ಕಲಂದರ್ ಶಾಫಿ ಕೊಲೆಯತ್ನ ಪ್ರಕರಣದಲ್ಲಿ ದೀಪಕ್ ಮತ್ತು ಸುಮಿತ್ ಸೇರಿ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ದೀಪಕ್ ಮತ್ತು ಸುಮಿತ್ ಕೊಲೆಯಾದ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರಿಗೆ ಪರಿಚಯಸ್ಥರೇ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಅಬ್ದುಲ್ ರಹಿಮಾನ್ ಮತ್ತು ಕಂದರ್ ಶಾಫಿ ಅವರು ನದಿ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುವ ಸಮಯ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿ ಏಕಾಏಕಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್ ಗಳೊಂದಿಗೆ ಯದ್ವಾ- ತದ್ಬಾ ತಿವಿದು, ಕಡಿದರು, ಆಗ ಪಕ್ಕದಲ್ಲಿದ್ದ ನಾನು ತಡೆಯಲು ಹೋದಾಗ ಚೂರಿಯಿಂದ, ಎದೆಗೆ, ಬೆನ್ನಿಗೆ, ಕೈಗೆ, ತಿವಿದು ತಲವಾರ್ ನಿಂದ ಕಡಿದಿದ್ದಾರೆ. ಈ ವೇಳೆ ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದರ್ ಶಾಫಿ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾರ್ ಎಂಬವರು ಬಂಟ್ಬಾಳ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬಂಟ್ವಾಳದ ಕಾಂಬೋಡಿ ಇರಾಕೋಡಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಅವರ ಮೃತದೇಹವನ್ನು ಉಳ್ಳಾಲದಿಂದ ಕೊಳತ್ತಮಜಲಿನವರೆಗೆ ಮೆರವಣಿಗೆಯಲ್ಲಿ ಸಾಗಿಸಿ ಬಳಿಕ ಕೊಳತ್ತಮಜಲು ಮಸೀದಿ ಆವರಣದಲ್ಲಿ ದಫನ ಕಾರ್ಯ ನಡೆಸಲಾಯಿತು.

ಮೃತದೇಹ ಬಿ.ಸಿ.ರೋಡಿಗೆ ಆಗಮಿಸುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು. ಮನೆಯ ಬಳಿಯೂ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಸುರತ್ಕಲ್‌ನಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ. ಮಂಗಳೂರು, ಸುರತ್ಕಲ್, ಮುಕ್ಕ, ಹಳೆಯಂಗಡಿ, ಪಕ್ಷಿಕೆರೆ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ಖಾಸಗಿ ಬಸ್‌ಗೆ ಸುರತ್ಕಲ್ ಸೂರಸ್‌ ಹೋಟೆಲ್ ಸಮೀಪ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಬಸ್ಸಿನ ಮುಂಭಾಗದ ಕನ್ನಡಿಗೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಇದರಿಂದಾಗಿ ಬಸ್ ಸಂಚಾರವನ್ನು ಮೊಟಕುಗೊಳಿಸಲಾಗಿದ್ದು, ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಕಳುಹಿಸಲಾಗಿದೆ.