ಹಾಸನ: ಹೃದಯಾಘಾತದಿಂದ 21 ವರ್ಷದ ಯುವತಿ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!
ಜಿಲ್ಲಾ ಸುದ್ದಿರಾಜ್ಯ


ಹಾಸನ: ಹೃದಯಾಘಾತದಿಂದ ಕುಸಿದುಬಿದ್ದು ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಇಪ್ಪತ್ತೊಂದು ವರ್ಷದ ಕವನ ಎಂದು ಕಂಡುಬಂದಿದೆ.
ಕವನ ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಪದವಿ ಪೂರ್ವ ಪರಿಕ್ಷೆ ನಡೆಯುತ್ತಿದ್ದು ಮೂರು ವಿಷಯಗಳ ಪರೀಕ್ಷೆ ಬರೆದಿದ್ದ ಕವನ ಇನ್ನೂ ಮೂರು ಪರೀಕ್ಷೆಗಳನ್ನು ಬರೆಯಬೇಕಿತ್ತು. ಸಂಜೆ ಮನೆಗೆ ಬಂದ ಕವನಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಕವನ ತಾಯಿ ಬಳಿ ಕುಡಿಯಲು ನೀರು ಕೇಳಿದ್ದಾಳೆ. ತಾಯಿ ನೀರು ತಂದು ಕೊಡುವಷ್ಟರಲ್ಲಿ ಕವನ ಮನೆಯಲ್ಲಿಯೇ ಕುಸಿದು ಬಿದ್ದಿದ್ದಳು.
ಕೂಡಲೇ ಪೋಷಕರು ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಕವನ ಕೊನೆಯುಸಿರೆಳೆದಿದ್ದಳು. ಸದ್ಯ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಇತ್ತೀಚಿಗೆ ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರಿಗೂ ಈ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಯುವಜನತೆ ಅಂತೂ ಈ ಒಂದು ಹೃದಯಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ.ಕಳೆದ ಇಪ್ಪತ್ತು ದಿನಗಳ ಅಂತರದಲ್ಲಿ ವಾರಕ್ಕೊಂದು ಸುದ್ದಿಗಳು ಬರುತ್ತಲೇ ಇದೆ.
ಇನ್ನೂ ಬದುಕಿ ಬಾಳಬೇಕಾದ ಯುವಕರು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವ ಸುದ್ದಿಗಳಿಂದ ಪೋಷಕರಿಗೆ ಆತಂಕ ಎದುರಾಗಿದೆ.ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು. ಹೃದಯಾಘಾತ ತಡೆಗಟ್ಟಲು ಏನಾದರೂ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಬೇಕಾಗಿದೆ.