ಹಾಲು, ಮೊಸರು, ಮಜ್ಜಿಗೆ ಮೇಲೆ ತೆರಿಗೆ ವಿಧಿಸಿದ ಜಗತ್ತಿನ ಏಕೈಕ ದೇಶ ಭಾರತ-ಚಂದ್ರ ತೇಜಸ್ವಿ ಕಿಡಿ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/15/20251 min read

ದೊಡ್ಡಬಳ್ಳಾಪು: ಅಗತ್ಯ ವಸ್ತುಗಳಾದ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹೀಗೆ ಎಲ್ಲಾ ವಸ್ತುಗಳ ಮೇಲೆ ತೆರಿಗೆ ವಿಧಿಸಿದ ಪ್ರಪಂಚದ ಏಕೈಕ ದೇಶ ಅಂದರೇ ಅದು ಭಾರತ ಮಾತ್ರ ಎಂದು ಸಿಪಿಐಎಂ ಪಕ್ಷದ ಮುಖಂಡರಾದ ಚಂದ್ರ ತೇಜಸ್ವಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ವಿರುದ್ದ ಕಿಡಿಕಾರಿದರು.

ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹಾಲಿನ ದರ ಏರಿಕೆಯಾಗಬೇಕು ಆ ದರದ ಲಾಭ ರೈತರಿಗೆ ಸೇರಬೇಕು ನಿಜ, ಆದರೇ, ಅದೇ ರೀತಿ ಗ್ರಾಹಕರಿಗೆ ಹೊರೆಯಾಗದ ರೀತಿ ರಾಜ್ಯ ಸರ್ಕಾರವು ಅಗತ್ಯ ಕ್ರಮವನ್ನು ಸಹ ಕೈಗೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ. ಯಾಕೆಂದರೇ ಹಾಲು ಜನಸಾಮಾನ್ಯರಿಗೆ ಅತಿ ಅಗತ್ಯ ವಸ್ತುಗಳಲ್ಲಿ ಒಂದು, ಇಂತವುಗಳಲ್ಲಿ ಲಾಭ ಅಪೇಕ್ಷಿಸದೇ ಸರ್ಕಾರವು ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು. ಆದರೇ, ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲ ಸೀತಾರಾಮನ್​ ಅವರು ಜನ ಸಾಮಾನ್ಯರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಹಾಲಿಗೆ ಸಂಬಂಧಿಸಿ ಎಲ್ಲಾ ಪದಾರ್ಥಗಳ ಮೇಲೆ ತೆರಿಗೆ ವಿಧಿಸಿದ್ದಾರೆ ಎಂದು ಆಕ್ರೊಶ ವ್ಯಕ್ತ ಪಡಿಸಿದರು.

ಕೇಂದ್ರ ಸರ್ಕಾರವು ಉದ್ಯಮಿಗಳ, ಶ್ರೀಮಂತರಿಗೆ ಸಂಬಂಧಿಸಿದ 16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಜೊತೆಗೆ ತೆರಿಗೆ ವಿನಾಯಿತಿಯನ್ನು ನೀಡಿದ್ದಾರೆ. ಅದೇ ಸಾಮಾನ್ಯ ಜನ ಬಳಕೆ ಮಾಡುವ ಎಲ್ಲಾ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ. ಆದೂ ಸಾಲದೇ ಎಲ್ಲವನ್ನು ಖಾಸಗಿ ಕರಣಕ್ಕೆ ಮುಂದಾಗಿದ್ದಾರೆ ಎಂದರು.

ಬಳಿಕ ಮಾತನಾಡಿದ ಸಿಪಿಐಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಸರ್ಕಾರವು ರಾಜ್ಯದ ಜನತೆಗೆ ಉಚಿತ ಯೋಜನೆಗಳನ್ನು ಕೊಟ್ಟಿದ್ದೀರಿ ಇದರಿಂದ ಕೆಲವು ಜನರಿಗೆ ಅನುಕೂಲವಾಗಿದೆ ನಿಜ, ಆದರೇ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಕಿತ್ತುಕೊಳ್ಳುವುದು ಏನು ಪ್ರಯೋಜನ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಪೋರೇಟ್​ ಕಂಪೆನಿಗಳಿಗೆ ಸಹಕಾರಿಯಾಗುವಂತೆ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು ಅದೇ ಮಾರ್ಗವನ್ನು ರಾಜ್ಯ ರಾಜ್ಯ ಸರ್ಕಾರವು ಅನುಸರಿಸುತ್ತಿದೆ. ಹಾಲಿನ ತೆರಿಗೆ ಏರಿಕೆ ಮಾಡಿ ಜನರಿಂದ ಸುಲಿಗೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಬದಲಿಗೆ ಕೆಎಂಎಫ್​ ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೇ ಅದರಿಂದಲೇ ಹಾಲಿನ ದರವನ್ನು ಪ್ರೋತ್ಸಾಹಿಸಬಹುದು. ಈ ರೀತಿಯ ಸುಧಾರಣೆಗಳನ್ನು ತರದೇ ಹಾಲಿನ ಮೇಲೆ ತೆರೆಗೆ ಹಾಕುವುದು ಎಷ್ಟು ಸಮಂಜಸ ಎಂದರು.

ಈ ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಪ್ರಭಾ ಬೆಳವಂಗಲ, ರೇಣುಕಾರಾಧ್ಯ ಸೇರಿದಂತೆ ತಾಲ್ಲೂಕಿನ ಪಕ್ಷದ ಮುಖಂಡರು ಉಪಸ್ಥಿತರಿದ್ದರು.