ರಾಯಚೂರು: ಜ್ಯೋತಿ ಕಾಲೋನಿಯಲ್ಲಿ ನಡೆದ ಗೃಹಿಣಿಯ ಸಾವು, ಹಲವು ಅನುಮಾನಗಳಿಗೆ ಕಾರಣವಾಗಿದೆ. ವರದಕ್ಷಿಣೆ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆಯ ವಿವರ:
ರಾಯಚೂರಿನ ಜ್ಯೋತಿ ಕಾಲೋನಿಯ ವಿದ್ಯಾ (30) ಮೃತಪಟ್ಟ ಗೃಹಿಣಿ.
ನಗರದ ವಿಜ್ಞಾನ ಕೇಂದ್ರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾ
ಕಳೆದ ಎರಡು ವರ್ಷಗಳ ಹಿಂದೆ ಮೆಡಿಕಲ್ ರೆಪ್ ಮಂಜುನಾಥ್ ಎಂಬುವವರ ಜೊತೆ ವಿದ್ಯಾ ಮದುವೆಯಾಗಿತ್ತು.
ಕುಟುಂಬಸ್ಥರ ಆರೋಪಗಳೇನು?
ಕಳೆದ ಆರು ತಿಂಗಳಿನಿಂದ ಪತಿ ಮಂಜುನಾಥ್ ಮತ್ತು ಅತ್ತೆಯಿಂದ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು.
ಪತಿ ಮಂಜುನಾಥ್ ನಿತ್ಯ ಕುಡಿದು ಬಂದು ವಿದ್ಯಾ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಪೊಲೀಸರು ಬರುವ ಮುನ್ನವೇ ಶವವನ್ನು ನೇಣು ಕುಣಿಜೆಯಿಂದ ಕೆಳಗಿಳಿಸಿರುವುದು ಕೊಲೆ ಎಂಬ ಶಂಕೆಯನ್ನು ಬಲಪಡಿಸಿದೆ ಎಂದು ವಿದ್ಯಾ ಮನೆಯರು ಆರೋಪಿಸಿದ್ದಾರೆ.
ವಿದ್ಯಾ ಪತಿ ಮತ್ತು ಅತ್ತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾರೆ ಎಂದು ಮೃತಳ ತಂದೆ ಆರೋಪಿಸಿದ್ದಾರೆ
ಈ ಕುರಿತು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ರಿಮ್ಸ್ ಶವಗಾರದ ಮುಂದೆ ಮೃತಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಶಾಂತವೀರ ಹಾಗೂ ತಹಶೀಲ್ದಾರ್ ಪರಶುರಾಮ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.