ದೆಹಲಿ/ ಬೆಂಗಳೂರು: ಏಪ್ರಿಲ್ 1 ಹೊಸ ಆರ್ಥಿಕ ವರ್ಷ ಆರಂಭವಾಗುವ ದಿನ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ಬೆಲೆ ಏರಿಕೆ ಪ್ರಸ್ತಾಪಗಳು ಬುಧವಾರದಿಂದಲೇ ಜಾರಿಯಾಗಲಿದೆ. ಇದರೊಂದಿಗೆ ಕೊಲ್ಲಿ ಯುದ್ಧದ ಕಾರಣ ಇನ್ನಷ್ಟು ವಸ್ತುಗಳು ದುಬಾರಿಯಾಗಲಿದ್ದು ಜನರನ್ನು ಸಂಕಷ್ಟಕ್ಕೀಡು ಮಾಡುವ ನಿರೀಕ್ಷೆ ಇದೆ.
ಆರ್ಥಿಕ ವರ್ಷದ ಮೊದಲ ದಿನದಿಂದಲೇ ರಾಜ್ಯ ದಲ್ಲಿ ವಾಣಿಜ್ಯ ಬಳಕೆಯ ವಿದ್ಯುತ್ ಮತ್ತು ರಾಷ್ಟ್ರೀ ಯ ಹೆದ್ದಾರಿಗಳಲ್ಲಿ ಟೋಲ್ ಏರಿಕೆಯಾಗಲಿದೆ. ಬೆಂಗಳೂರು ನಗರದಲ್ಲಿ ನೀರಿನ ದರವೂ ಏರಿಕೆಯಾಗಲಿದೆ. ಕೇಂದ್ರ ಸರಕಾರ ಗೃಹಬಳಕೆ ಸಿಲಿಂಡರ್ ದರವನ್ನು ಈಗಾಗಲೇ ಏರಿಸಿದ್ದು, ಯುದ್ಧ ಮುಂದುವರಿದರೆ ಉಳಿದ ಪೆಟ್ರೋಲಿಯಂ ಉತ್ಪನ್ನಗಳ ದರವನ್ನೂ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಖಾಸಗಿ ಇಂಧನ ಕಂಪನಿಗಳು ಈಗಾಗಲೇ ದರ ಏರಿಸಿದ್ದು ಪೆಟ್ರೋಲ್ ದರ 100ರ ಗಡಿ ದಾಟಿದೆ.
ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದ್ದು, ಕಾರುಗಳಿಗೆ 5ರಿಂದ 10 ರು. ಟೋಲ್ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆಯ ವಾಹನಗಳು 15ರಿಂದ 40 ರು. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ವಾರ್ಷಿಕ ಪಾಸ್ ದರವನ್ನು 2026-27ನೇ ಸಾಲಿಗೆ 75 ರೂ. ಹೆಚ್ಚಳ ಮಾಡಿ ಹೊರಡಿಸಿದ ಅಧಿಸೂಚನೆ ಕೂಡ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ವಾರ್ಷಿಕ ಪಾಸ್ ದರವು 3,000ರಿಂದ 3,075 ರು.ಗಳಿಗೆ ಏರಿಕೆಯಾಗಲಿದೆ. ನೀರು, ವಿದ್ಯುತ್ ದರ ಪರಿಷ್ಕರಣೆ: ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀರಿನ ದರವನ್ನು ಶೇ.3ರಷ್ಟು ಹೆಚ್ಚಳ ಮಾಡಲಿದ್ದು, ಇದರಿಂದ ಬೆಂಗಳೂರಿಗರಿಗೆ ಮತ್ತೊಂದು ಹೊರೆ ಬೀಳಲಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಎಸ್ಕಾಂಗಳ ಒತ್ತಾಯಕ್ಕೆ ಮಣಿದು 2025-26ನೇ ಸಾಲಿಗೆ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಇದರಿಂದ ಹೊಸ ಹಣಕಾಸು ವರ್ಷದಲ್ಲಿ ಕೈಗಾರಿಕೆಗಳು ಮತ್ತು ವಾಣಿಜ್ಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಸಿಲಿಂಡರ್ ಕೊರತೆ, ನೀರು ಮತ್ತು ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ಹೊಟೇಲ್ ಮಾಲೀಕರೂ ದರ ಏರಿಸುವ ಸಾಧ್ಯತೆ ಇದೆ. ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಕಬ್ಬಿಣ, ಉಕ್ಕು, ಸಿಮೆಂಟ್ ಮತ್ತಿತರ ಮೂಲ ಸೌಕಯ್ಯ ಉತ್ಪನ್ನಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿವೆ. ಪ್ಲಾಸ್ಟಿಕ್ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗಿದೆ. ಇದೇ ವೇಳೆ ಅಟೋ ಮೊಬೈಲ್ ಉದ್ದಿಮೆಗಳು ಏಪ್ರಿಲ್ ಒಂದರಿಂದ ದ್ವಿಚಕ್ರ ಮತ್ತು ಕಾರುಗಳ ಬೆಲೆ ಏರಿಸುವುದಾಗಿ ಈಗಾಗಲೇ ಪ್ರಕಟಿಸಿವೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ದರದಲ್ಲೂ ಏರಿಕೆ ನಿಶ್ಚಿತವಾಗಿದೆ. ಬಿಟುಮೆನ್ ಕೊರತೆಯಿಂದ ದೇಶದ ರಸ್ತೆ ಕಾಮಗಾರಿಗಳೂ ವಿಳಂಬವಾಗಲಿದ್ದು ಕಾಮಗಾರಿ ಮೊತ್ತ ಏರುವ ಸಾಧ್ಯತೆ ಇದೆ.
ಏ.1ರಿಂದ ಏನೇನು ಬದಲಾವಣೆ?
- ಟೋಲ್‌ಗಳಲ್ಲಿ ಇನ್ನು ಮುಂದೆ ನಗದು ಪಾವತಿ ಸಂಪೂರ್ಣ ಸ್ಥಗಿತ
- ಹೋಟೆಲ್‌ಗಳಲ್ಲಿ ಬಿಲ್ ಪಾವತಿ ಲಕ್ಷ ರು ದಾಟಿದರೆ ಪ್ಯಾನ್ ಕಡ್ಡಾಯ
- ರೈಲು ಹೊರಡುವ 8 ಗಂಟೆಗೆ ಮುನ್ನ ಮುಂಗಡ ಟಿಕೆಟ್ ರದ್ದುಪಡಿಸಿದರೆ ರೀಫಂಡ್ ಇಲ್ಲ
- ಶೇ.50 ಹೆಚ್‌ಆರ್‌ಎ ಸೌಲಭ್ಯದ ನಗರಗಳ ಪಟ್ಟಿಗೆ ಬೆಂಗಳೂರು ಸೇರ್ಪಡೆ
- ಉದ್ಯೋಗಿಯ ಮೂಲ ವೇತನ, ಒಟ್ಟು ವೇತನದ (ಸಿಟಿಸಿ) ಕನಿಷ್ಠ ಶೇ.50 ಕಡ್ಡಾಯ
- ಹೊಸ ಆದಾಯ ತೆರಿಗೆ ಕಾಯಿದೆ ಜಾರಿ, ತೆರಿಗೆ ವಂಚನೆ ತಡೆಗೆ ಮತ್ತಷ್ಟು ಕ್ರಮ
- ಬ್ಯಾಂಕ್‌ಗಳಲ್ಲಿ ವಾರ್ಷಿಕ 10 ಲಕ್ಷ ಒಳಗಿನ ಹಣ ಠೇವಣಿಗೆ ಪ್ಯಾನ್ ಅಗತ್ಯವಿಲ್ಲ.