ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿವಾರಣೆ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ರಾಜಕಾಲುವೆ ಬಫರ್ ಜೋನ್ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ವೇಗಗೊಳಿಸುವ ಕುರಿತು, ಪೂರ್ವ ನಗರ ಪಾಲಿಕೆ *ಆಯುಕ್ತರಾದ ಡಿ.ಎಸ್. ರಮೇಶ್* ಅವರು ಬಿ-ಸ್ಮೈಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಯೋಜನೆಯ ಪ್ರಗತಿ ಪರಿಶೀಲಿಸಿದ ಆಯುಕ್ತರು, ಭೂಸ್ವಾಧೀನ ಹಾಗೂ ತಾಂತ್ರಿಕ ಪ್ರಕ್ರಿಯೆಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯೋಜನೆಯ ಪ್ರಮುಖ ವಿವರಗಳು
ಸಂಚಾರಯುಕ್ತ ಪರಿಕಲ್ಪನೆಯಡಿ, ಬೆಳ್ಳಂದೂರು ಕೆರೆ ಔಟ್ಲೆಟ್ ಇಂದ ವರ್ತೂರು ಕೆರೆ ಕೋಡಿ ವರೆಗೆ (ವರ್ಜಿನೀಯ ಮಾಲ್) ರಾಜಕಾಲುವೆ ಬಫರ್ ವಲಯದಲ್ಲಿ ಸುಮಾರು 18 ಕಿ.ಮೀ ಉದ್ದದ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಕಾಲುವೆಯ ಎರಡೂ ಬದಿಗಳಲ್ಲಿ 15 ಮೀಟರ್ ಅಗಲದ ರಸ್ತೆ ಅಭಿವೃದ್ಧಿಪಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿರುತ್ತದೆ.
ಯೋಜನೆಯ ಮುಖ್ಯ ಉದ್ದೇಶಗಳು:
• ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು
• ರಸ್ತೆ ಜಾಲವನ್ನು ವಿಸ್ತರಿಸುವುದು
• ರಾಜಕಾಲುವೆಗಳ ಒತ್ತುವರಿಯನ್ನು ತಡೆಯಲು ಶಾಶ್ವತ ರಕ್ಷಣಾ ವ್ಯವಸ್ಥೆ ಕಲ್ಪಿಸುವುದು
• ನಗರ ಮೂಲಸೌಕರ್ಯವನ್ನು ಬಲಪಡಿಸುವುದು
ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳು:
ಅಲೈನ್ಮೆಂಟ್ ಮತ್ತು ನಕ್ಷೆಗಳ ದೃಢೀಕರಣ
ರಾಜಕಾಲುವೆ ಬಫರ್ ವಲಯಗಳನ್ನು ಗುರುತಿಸಿ, ರಸ್ತೆ ಅಭಿವೃದ್ಧಿಗೆ ಅಗತ್ಯವಾದ ಅಲೈನ್ಮೆಂಟ್ ಸಿದ್ಧಪಡಿಸಿ ಸೂಪರ್ ಇಂಪೋಸ್ಡ್ ನಕ್ಷೆಗಳನ್ನು ಅಂತಿಮಗೊಳಿಸಲು ಹಾಗೂ ಅಪರ ಮುಖ್ಯ ನಗರ ಯೋಜನಾಧಿಕಾರಿಗಳಿಂದ ಅಲೈನ್ಮೆಂಟ್ ಹಾಗೂ ನಕ್ಷೆಗಳ ಅಂತಿಮ ಅನುಮೋದನೆ ಪಡೆದು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ವಿವರವಾದ ಯೋಜನಾ ವರದಿ ಸಲ್ಲಿಸಿ
ಬಫರ್ ವಲಯದಲ್ಲಿನ ಸರ್ವಿಸ್ ರಸ್ತೆ ಹಾಗೂ ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ ಸಲ್ಲಿಸಲು ಸೂಚಿಸಲಾಯಿತು.
ಕೆಲವು ಪ್ರದೇಶಗಳಲ್ಲಿ 10ಕ್ಕೂ ಹೆಚ್ಚು ಅಂತಸ್ತಿನ ಎತ್ತರದ ಕಟ್ಟಡಗಳು ರಸ್ತೆ ಮಾರ್ಗಕ್ಕೆ ಸಮೀಪದಲ್ಲಿರುವ ಸಾಧ್ಯತೆ ಇರುವುದರಿಂದ, ಪ್ರಮುಖ ಪ್ರದೇಶಗಳಲ್ಲಿ ನಕ್ಷೆ ಹಾಗೂ ಭೌತಿಕವಾಗಿ ಸ್ಥಳ ಪರಿಶೀಲನೆ ನಡೆಸಿ ದಾಖಲೆ ಮತ್ತು ವಾಸ್ತವ ಸ್ಥಿತಿಯ ನಡುವಿನ ವ್ಯತ್ಯಾಸ ಪರಿಶೀಲಿಸಲು ಸೂಚಿಸಲಾಯಿತು.
ಸರ್ವೇ ಮತ್ತು ಸ್ವತ್ತು ಗುರುತುಪಡಿಸುವಿಕೆ
ಕಂದಾಯ ದಾಖಲೆಗಳು, ಅಲೈನ್ಮೆಂಟ್, ಸೂಪರ್ ಇಂಪೋಸ್ಡ್ ನಕ್ಷೆ ಹಾಗೂ ಸಿಡಿಪಿ (CDP) ನಕ್ಷೆಗಳ ಆಧಾರದ ಮೇಲೆ ಭೂಸ್ವಾಧೀನವನ್ನು ಅಂತಿಮಗೊಳಿಸಲು ಸೂಚಿಸಲಾಯಿತು.,ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಒಳಪಡುವ ಖಾಸಗಿ ಸ್ವತ್ತುಗಳನ್ನು ನಿಖರವಾಗಿ ಗುರುತಿಸಲು ಸೂಚಿಸಲಾಯಿತು. ಭೂಸ್ವಾಧೀನಕ್ಕೆ ಒಳಪಡುವ ಭೂಮಿಯ ಮಾಲೀಕರಿಗೆ ಟಿ.ಡಿ.ಆರ್ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕರಡು ಅಧಿಸೂಚನೆ ಪಟ್ಟಿ ಸಿದ್ದಪಡಿಸಿ
ಅಲೈನ್ಮೆಂಟ್ ಮತ್ತು ನಕ್ಷೆಗಳ ಅಂತಿಮ ದೃಢೀಕರಣದ ನಂತರ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲು ಕರಡು ಅಧಿಸೂಚನೆ ಪ್ರತಿಯನ್ನು ಸಿದ್ಧಪಡಿಸಿ ಸಲ್ಲಿಸಲು ಸೂಚಿಸಲಾಯಿತು.
ಬಫರ್ ಜೋನ್ ನಿಯಮಗಳು ಮತ್ತು ಸೆಟ್ಬ್ಯಾಕ್ ಗಣನೆ
ಬಫರ್ ಜೋನ್ ಪ್ರದೇಶವನ್ನು ಪಾರ್ಕ್ ಮತ್ತು ಮುಕ್ತ ಸ್ಥಳ ಎಂದು ಪರಿಗಣಿಸಲಾಗುತ್ತದೆ.
ನಿಯಮಗಳ ಪ್ರಕಾರ ಅಭಿವೃದ್ಧಿದಾರರು 15% ಜಾಗವನ್ನು ಮುಕ್ತ ಸ್ಥಳವಾಗಿ ಬಿಡಬೇಕು, ಬಫರ್ ಅಂಚಿನಿಂದ ಕಡ್ಡಾಯ ಸೆಟ್ಬ್ಯಾಕ್ ಪಾಲನೆ ಮಾಡಬೇಕು. ಈ ನಿಯಮಗಳ ಕಟ್ಟುನಿಟ್ಟಿನ ಅನುಸರಣೆ ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇಂದು ನಡೆದ ಸಭೆಯಲ್ಲಿ ಅಪರ ಆಯುಕ್ತರು ಲೋಖಂಡೆ ಸ್ನೇಹಲ್ ಸುಧಾಕರ್, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಬಿ.ಎಸ್. ಪ್ರಹ್ಲಾದ್, ಅಪರ ಮುಖ್ಯ ನಗರ ಯೋಜಕರಾದ ಬಿ.ಎನ್. ಗಿರೀಶ್, ಉಪ ಆಯುಕ್ತರು (ಭೂಸ್ವಾಧೀನ ಮತ್ತು ಟಿಡಿಆರ್), ಕಾರ್ಯಪಾಲಕ ಅಭಿಯಂತರರು (ಬಿ-ಸ್ಮೈಲ್), ಸಹಾಯಕ ಅಭಿಯಂತರರು (ಭೂಸ್ವಾಧೀನ ಮತ್ತು ಟಿಡಿಆರ್) ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
