Tuesday, May 19, 2026
Home ಬೆಂಗಳೂರು ನಗರಮೊಬೈಲ್ ಇಲ್ಲ, ಎಟಿಎಂ ಬಳಸ್ತಿಲ್ಲ, ಮಿಸ್ಸಿಂಗ್ ಆಗಿ ಎರಡೂವರೆ ತಿಂಗಳಾದ್ರೂ ಈ ಬಾಲಕಿಯರು ಮತ್ತೆ ಎಲ್ಲಿ ಹೋದ್ರು..?

ಮೊಬೈಲ್ ಇಲ್ಲ, ಎಟಿಎಂ ಬಳಸ್ತಿಲ್ಲ, ಮಿಸ್ಸಿಂಗ್ ಆಗಿ ಎರಡೂವರೆ ತಿಂಗಳಾದ್ರೂ ಈ ಬಾಲಕಿಯರು ಮತ್ತೆ ಎಲ್ಲಿ ಹೋದ್ರು..?

ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ

by Dharmaraju
0 comments

ಬೆಂಗಳೂರು: ಪಿಯುಸಿ ಓದುತ್ತಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾಗಿ ಎರಡೂವರೆ ತಿಂಗಳು ಕಳೆದರೂ ಯಾವುದೇ ಸುಳಿವು ಸಿಗದೆ ಪೋಷಕರು ಕಂಗಾಲಾದ ಘಟನೆಯೊಂದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ಸೆಕೆಂಡ್ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ನಾಪತ್ತೆಯಾದ ಅಪ್ರಾಪ್ತೆಯರು. ಇವರಿಗಾಗಿ ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ನಾಪತ್ತೆಯಾದ ಈ ಇಬ್ಬರು ಬಾಲಕಿಯರಲ್ಲಿ ಮೊಬೈಲ್ ಇರಲಿಲ್ಲ. ಎಟಿಎಂ ಕಾರ್ಡ್ ಗಳನ್ನು ಬಳಸುತ್ತಿಲ್ಲ. ಯಾವುದೇ ಸ್ನೇಹಿತರ ಅಥವಾ ಕುಟುಂಬಸ್ಥರ ಮನೆಗೂ ಹೋಗಿಲ್ಲ. ಮನೆಯಿಂದ ಹೋಗುವಾಗ ಇಬ್ಬರು ಕೇವಲ 3 ಸಾವಿರ ರೂ ತೆಗೆದುಕೊಂಡು ಹೋಗಿದ್ದಾರೆ. ಅದೇ ಹಣದಲ್ಲಿ ಸುಮಾರು 75 ದಿನ ಹೀಗೇ ಇರಲು ಹೇಗೆ ಸಾಧ್ಯ ಎಂಬ ಯಕ್ಷ ಪ್ರಶ್ನೆ ಕುಟುಂಬಸ್ಥರದ್ದು.

ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಇವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿ ಹೋದ್ರು ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ. ಕುಟುಂಬಸ್ಥರು ಕೊಟ್ಟ ಮಾಹಿತಿ ಆಧರಿಸಿಯೇ ಬಾಲಕಿಯರ ಎಲ್ಲಾ ಇಷ್ಟದ ಜಾಗಗಳಲ್ಲಿ ಪೊಲೀಸರು ಪತ್ತೆ ಕಾರ್ಯ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿನಿಯರು ಮನೆ ಬಿಟ್ಟು ಹೋಗೋದಕ್ಕೆ ಕೂಡಾ ನಿಖರವಾದ ಕಾರಣ ತಿಳಿದುಬಂದಿಲ್ಲ.

ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಇರೋದ್ರಿಂದ ಇವರು ಕೈಯಲ್ಲಿ ಆಧಾರ್ ಕಾರ್ಡ್‌ ಇದ್ದು, ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಜನವರಿ 31 ರಂದು ಇಬ್ಬರು ಕೂಡಾ ಮನೆ ಬಿಟ್ಟು ಹೋಗಿದ್ದು, ಬರೋಬ್ಬರಿ ಎರಡೂವರೆ ತಿಂಗಳುಗಳೇ ಕಳೆದಿವೆ. ಹೀಗಾಗಿ ಯುವತಿಯರ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿದ್ಯಾರ್ಥಿನಿಯರನ್ನು ಹುಡುಕಲು ಪೊಲೀಸರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು ಈ ಗಡುವು ಮುಗಿದು ಒಂದು ತಿಂಗಳೇ ಕಳೆದಿದೆ. ಆದರೂ ಈ ಬಾಲಕಿಯರ ಸುಳಿವು ಪತ್ತೆಯಾಗದೇ ಇರೋದು ಪೋಷಕರನ್ನು ಆತಂಕಕ್ಕೆ ತಳ್ಳಿದೆ.

You may also like

Leave a Comment