ದೊಡ್ಡಬಳ್ಳಾಪುರ: ಜಗಜ್ಯೋತಿ ಬಸವಣ್ಣ ಜಾತ್ಯತೀತ ನಾಯಕ. 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡುವುದರ ಮೂಲಕ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡಿದ ಮಹಾನಾಯಕ ಬಸವಣ್ಣ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ತೂಬಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬಸವಣ್ಣನವರ ತತ್ವ-ಆದರ್ಶಗಳನ್ನು ಪ್ರತಿಯೊಂದು ಸಮಾಜ ಪಾಲನೆ ಮಾಡುತ್ತಿರುವುದರಿಂದಲೇ ನಮ್ಮ ದೇಶ ಜಾತ್ಯತೀತ ಪಥದಲ್ಲಿ ಹೆಮ್ಮರವಾಗಿ ಬೆಳೆದಿದೆ,” ಎಂದರು.
ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, “ ಶಿವನ ವಾಹನ ನಂದಿ ಹುಟ್ಟಿದ ದಿನವೇ ಬಸವ ಜಯಂತಿ, ಆದ್ದರಿಂದ ಈ ದಿನ ಹಸು-ಎತ್ತುಗಳನ್ನು ಪೂಜಿಸಿ ವಿಶೇಷ ಭಕ್ಷಗಳನ್ನು ನೀಡುವುದರ ಮೂಲಕ ಆಚರಿಸಬೇಕು ಎಂದು ಬಸವ ತತ್ವ ವಿರೋಧಿಗಳು ಜನಸಾಮಾನ್ಯರಲ್ಲಿ ಮೌಢ್ಯ ಬಿತ್ತಿದ್ದಾರೆ. ಬಸವಣ್ಣನವರ ವಿಚಾರಧಾರೆಗಳು ತಲುಪಬಾರದು ಎಂಬ ವ್ಯವಸ್ಥಿತ ಹುನ್ನಾರ ಈ ಮೌಢ್ಯದ ಹಿಂದಿದೆ.
ನಿಜವಾದ ಬಸವ ಜಯಂತಿ ಎಂದರೆ ತಮ್ಮ ಮನೆಯ ಹಸುಗಳು, ಎತ್ತುಗಳನ್ನು ಪೂಜಿಸುವುದರ ಜೊತೆಗೆ, ಮನುಷ್ಯ ಮನುಷ್ಯರ ನಡುವೆ ವರ್ಣ, ಜಾತಿ, ಲಿಂಗ ಭೇದ ಬೇರೂರಿದ್ದ ಕಾಲದಲ್ಲಿ ಸಮಾನತೆ, ಸಹೋದರತೆ ಮತ್ತು ಶಾಂತಿಯನ್ನು ಆಧ್ಯಾತ್ಮಿಕ ಪ್ರಜಾಪ್ರಭುತ್ವದ ಮೂಲಕ ಅನುಷ್ಠಾನಗೊಳಿಸಲು ಮುಂದಾದ ಮಹಾ ಮಾನವತಾವಾದಿ ಬಸವಣ್ಣ ಮತ್ತು ಅವರ ವಿಚಾರಧಾರೆಗಳನ್ನು ನೆನೆಯುವ ದಿನವಾಗಬೇಕು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮೌಢ್ಯ ತೊಲಗಿಸಿ ವೈಚಾರಿಕತೆ ಬೆಳೆಸಿಕೊಂಡು ಇತರರಲ್ಲಿ ಅದನ್ನು ಮೂಡಿಸುವುದೇ ಬಸವಣ್ಣನವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ,” ಎಂದು ಅಭಿಪ್ರಾಯಪಟ್ಟರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ವಿಶೇಷ ಮಂಟಪದಲ್ಲಿ ಬಸವಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.
ವಾದ್ಯಮೇಳದೊಂದಿಗೆ ಆರತಿ ಹಿಡಿದ ಮಹಿಳೆಯರು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ಸ್ವಾಮಿಗೆ ಆರತಿ ಸಲ್ಲಿಸಿದರು. ನೂರಾರು ಭಕ್ತರು ಬಸವೇಶ್ವರ ದೇವಾಲಯದಲ್ಲಿ ಬಸವಮೂರ್ತಿಗೆ ವಿಶೇಷ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಆಗಮಿಸಿದ ಭಕ್ತರಿಗೆ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.
ವಿಶೇಷ ಪೂಜಾ ಕಾರ್ಯಕ್ರಮಗಳ ಬಳಿಕ ಸಂಜೆ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು. ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್, ತಾಲೂಕು ಸೊಸೈಟಿ ನಿರ್ದೇಶಕ ಪುರುಷೋತ್ತಮ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಎಚ್.ಎ., ಜೆಡಿಎಸ್ ಹೋಬಳಿ ಅಧ್ಯಕ್ಷ ಜಗನ್ನಾಥ್, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಬಚ್ಚಹಳ್ಳಿ ನಾಗರಾಜು, ಮುದ್ದಣ್ಣ, ನಾಗೇನಹಳ್ಳಿ ನಾಗರಾಜು, ಹಳ್ಳಿ ರೈತ ಅಂಬರೀಶ್, ಸ್ಥಳೀಯ ಮುಖಂಡರಾದ ವೆಂಕಟೇಶ್ ಟಿ.ವಿ., ಮುನಿಕೃಷ್ಣಪ್ಪ, ಕನಕದಾಸ, ಸುಬ್ರಹ್ಮಣ್ಯ, ಗಂಗರಾಜು, ಶ್ರೀಧರ, ನಿವೃತ್ತ ದೈಹಿಕ ಶಿಕ್ಷಕ ವಿಶ್ವನಾಥ್ ಗೌಡರ್, ಎಸ್ ಎಲ್ ಆರ್ ಎಸ್ ಶಾಲೆ ಮುಖ್ಯ ಶಿಕ್ಷಕ ನಾಗರಾಜು, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಹಾನಂದ ಆರಾಧ್ಯ, ಸದಾನಂದಯ್ಯ, ಚಂದ್ರು, ಉದಯ ಆರಾಧ್ಯ ಉಪಸ್ಥಿತರಿದ್ದರು.