ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದಿರುವ ಹೊಸಕೋಟೆ ಶ್ರೀ ಅವಿಮುಕೇಶ್ವರಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಹಸ್ರಾರು ಸಂಖ್ಯೆ ಭಕ್ತ ಸಮೂಹದ ನಡುವೆ ಅದ್ಧೂರಿಯಾಗಿ ನಡೆಯಿತು.
ಬೆಂಡಿಗಾನಹಳ್ಳಿ ಕುಟುಂಬದಿಂದ ನೂತನವಾಗಿ ನಿರ್ಮಿಸಿದ ರಥಕ್ಕೆ ನಗರದ ಬಸವೇಶ್ವರ ಸರ್ಕಲ್ ಬಳಿ ಮುಂಜನೆಯಿಂದಲೇ ಎಲ್ಲೆಡೆಯಿಂದ ಆಗಮಿಸಿದ ಭಕ್ತರು ತೆಂಗಿನಕಾಯಿ ಹೊಡೆಸಿ, ಆರತಿ ಬೆಳಗಿ ರಥದ ಗಾಲಿಗೆ(ಚಕ್ರ) ಉಪ್ಪು ಮತ್ತು ಮೆಣಸು ಸುರಿದು ಪ್ರದಕ್ಷಿಣೆ ಹಾಕಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಅವಿಮುಕ್ತೆಶ್ವರ ದೇವಾಲಯದಿಂದ ಅವಿಮುಕ್ತೆಶ್ವರಸ್ವಾಮಿ ಮತ್ತು ಬಾಲ ತ್ರಿಪುರ ಸುಂದರಿ ದೇವಿಯ ಉತ್ಸವ ಮೂರ್ತಿಗಳನ್ನು ಮಧ್ಯಾನ್ಹ 1 ಗಂಟೆಗೆ ತೇರು ಇರುವ ಬಸವೇಶ್ವರ ವೃತ್ತದ ವರೆಗೆ ತರಲಾಯಿತು. ವೀರ ಕುಮಾರರ ಅಲಗು ಸೇವೆಯೊಂದಿಗೆ ಪೂಜಾರಿ ಕಿರಣ್ ಹೂವಿನ ಕರಗ ಹೊತ್ತು ರಥ ಪ್ರದಕ್ಷಿಣೆ ಹಾಕಿದರು. ಗೋವಿಂದಾ…ಗೋವಿಂದಾ..ಎಂಬ ಝೇಂಕಾರ ಪ್ರತಿಧ್ವನಿಸಿತು..

ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ , ಅವಿಮುಕ್ತಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಬ್ರೌಪದಮ್ಮ ಕರಗ ಮಹೋತ್ಸವ ಒಟ್ಟಿಗೆ ಸೇರಿ ಆಚರಿಸುವ ಹಬ್ಬವಾಗಿದೆ. 1904ರಿಂದ ಹೊಸಕೋಟೆಯಲ್ಲಿ ನಿರಂತರವಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ. ರಥೋತ್ಸವವು ತನ್ನದೇ ಆದ ಇತಿಹಾಸ ಹೊಂದಿದೆ.
ಕಳೆದ ಬಾರಿ ಕೊಟ್ಟ ಮಾತಿನಂತೆ ನಮ್ಮ ಕುಟುಂಬದಿಂದಲೆ ಸುಮಾರು 2.5 ಕೋಟಿ ವೆಚ್ಚದಲ್ಲಿ ಹೊಸ ರಥವನ್ನು ಕೊಡುಗೆ ಕೊಟ್ಟು, ಈ ಬಾರಿ ಹೊಸ ರಥದಲ್ಲಿ ಬ್ರಹ್ಮರಥೋತ್ಸವ ಆಚರಣೆ ಮಾಡಲಾಗುತ್ತಿದೆ. ಇದು ರಥೋತ್ಸವಕ್ಕೆ ಹೊಸ ಮೆರಗು ನೀಡಿದೆ ಎಂದರು.

ಹೊಸಕೋಟೆ ಬ್ರಹ್ಮರಥೋತ್ಸವಕ್ಕೆ ಬೆಂಡಿಗಾನಹಳ್ಳಿ ಕುಟುಂಬದವರು ಮಾಡಿಸಿಕೊಟ್ಟಿರುವ ನೂತನ ತೇರು ವೀಕ್ಷಣೆಗೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದಿದ್ದರು. ಸಾವಿರಾರು ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ರಥಕ್ಕೆ ಉಪ್ಪು ಮತ್ತು ಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಉತ್ಸವ ಮೂರ್ತಿಗಳನ್ನು ರಥದಲ್ಲಿಟ್ಟು ಎಳೆಯಲು ಚಾಲನೆ ನೀಡಲಾಯಿತು. ಉರಿ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ರಥದೊಂದಿಗೆ ಸಂಭ್ರಮದಿಂದ ಹೆಜ್ಜೆ ಹಾಕಿದರು. ಅವರ ಉತ್ವಕ್ಕೆ ಸುಡು ಬಿಸಿಲು ಅಡ್ಡಿಯಾಗಲಿಲ್ಲ
ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ವೀರಗಾಸೆ, ಡೊಲ್ಲುಕುಣಿತ, ಬೊಂಬೆ ಕುಣಿತ ಸೇರಿ ಹಲವು ಕಲಾ ತಂಡಗಳು ವಿವಿಧ ತಮಟೆ ವಾದ್ಯ ತಂಡಗಳು ಉತ್ಸವಕ್ಕೆ ಮೆರಗು ನೀಡಿದವು. ಲಕ್ಷಾಂತರ ಭಕ್ತರು ಪಾಲ್ಗೊಂಡ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬೀಸಿಗೆ ಬೇಗೆ ತಣಿಸಲು ಮಜ್ಜಿಗೆ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.
ಇತಿಹಾಸ ಪ್ರಸಿದ್ದ ರಥೋತ್ಸವದಲ್ಲಿ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ರಥೋತ್ಸವ ಆಚರಣೆ ಸಮಿತಿ ಕನ್ವಿನರ್ ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ,ವಿ ಬೈರೇಗೌಡ, ಪ್ರಧಾನ ಅರ್ಚಕ ರವಿಕುಮಾರ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಸುಬ್ಬರಾಜ್, ಮುಖಂಡರಾದ ಸಿ. ಜಯರಾಜ್, ಸುಭಾಷ್ ಗೌಡ, ಸದಾನಂದ್ ಸೇರಿ ಹಲವು ಮುಖಂಡರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
