ಮಹದೇವಪುರ: ಹೂಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ ಭಕ್ತರ ಜಯ ಘೋಷದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಮೆರವಣಿಗೆಯಲ್ಲಿ ತಂದು ಅಲಂಕೃತ ರಥದಲ್ಲಿ ಬೆಳಿಗ್ಗೆ 10.30ಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಪೂಜಾರಿಗಳು ರಥದಲ್ಲಿ ಮತ್ತೊಮ್ಮೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಸೇವಾ ಮಂಡಳಿ ಸದಸ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ಹೂಡಿ ಗ್ರಾಮದ ಪ್ರಮುಖ ಬೀದಿಯಲ್ಲಿ ರಥವನ್ನ ಗ್ರಾಮಸ್ಥರು ಭಕ್ತಿಭಾವದಿಂದ ಎಳೆದರು.
ರಥಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆಹಣ್ಣು, ದವನ, ಹೂ ಮುಂತಾದ ಮಂಗಳಕರ ವಸ್ತುಗಳನ್ನು ಅರ್ಪಿಸಿ ಹರಕೆ ತೀರಿಸಿದರು.
ರಥದ ಮುಂದೆ ಸಿಂಗಾರಗೊಂಡ ಎತ್ತುಗಳ ಬಂಡಿ, ಕಂಸಾಳೆ, ಡೊಳ್ಳು ಕುಣಿತ, ತಮಟೆ ಹಾಗೂ ಮಂಗಳವಾದ್ಯಗಳ ನಾದ ರಥೋತ್ಸವಕ್ಕೆ ಮೆರೆಗನ್ನು ನೀಡಿತು.
ಹೂಡಿ, ತಿಗಳರಪಾಳ್ಯ, ರಾಜಪಾಳ್ಯ, ಅಯ್ಯಪ್ಪನಗರ, ಕಾವೇರಿ ನಗರ, ಗರುಡಾಚಾರ್ ಪಾಳ್ಯ, ಮಹದೇವಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.
ಭಕ್ತರಿಗಾಗಿ ಅನ್ನದಾಸೋಹ, ಪಾನಕ ಹಾಗೂ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಅದನ್ನು ಸವಿದು ಧಾರ್ಮಿಕ ಉತ್ಸವವನ್ನು ಸಾರ್ಥಕಗೊಳಿಸಿದರು.
ಐದು ದಿನಗಳ ಕಾಲ ನಡೆಯುವ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಜನರಲ್ಲಿ ಸಂತಸ ಮತ್ತು ಉತ್ಸಾಹ ತುಂಬಿದವು. ಗ್ರಾಮಸ್ಥರು ಹಾಗೂ ಭಕ್ತರು ಉತ್ಸವವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಹೆಚ್.ಟಿ. ಶ್ರೀನಿವಾಸ್ ರೆಡ್ಡಿ, ಹೆಚ್.ಎಸ್. ಪಿಳ್ಳಪ್ಪ, ಮಂಜುನಾಥ್, ಹೆಚ್.ಎನ್. ಮೋಹನ್ ರೆಡ್ಡಿ, ಅನೂಪ್ ಕುಮಾರ್, ಓಂ ಶಕ್ತಿ ಶ್ರೀನಿವಾಸ್ ರೆಡ್ಡಿ, ವಿಶ್ವನಾಥ್ ರೆಡ್ಡಿ,ಆಂಜಿನಪ್ಪ, ನರೇಂದ್ರ ಬಾಬು, ವಿಜಯ್ ಗೌಡ, ಮಹೇಶ್ ಗೌಡ, ಪವನ್ ಶೆಟ್ಟಿ, ಪವನ್ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.