ಹೊಸದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅರ್ನಬ್’ ಚಂಡಮಾರುತ ಮಂಗಳವಾರ ಬೆಳಗ್ಗೆ ಅತ್ಯಂತ ತೀವ್ರ ಚಂಡಮಾರುತವಾಗಿ ಬಲಗೊಂಡಿದ್ದು, ಅಕ್ಟೋಬರ್ 28ರ ಬುಧವಾರ ಬೆಳಗ್ಗೆ ಪುದುಚೇರಿಯ ಯಾನಂ ಸಮೀಪ ಭೂಕುಸಿತ ಸಂಭವಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಕರಾವಳಿಯ ರಾಜ್ಯಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.

ಗಂಟೆಗೆ 115ರಿಂದ 125 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಗಾಳಿಯ ವೇಗ ಕೆಲವೊಮ್ಮೆ ಗಂಟೆಗೆ 140 ಕಿ.ಮೀ.ವರೆಗೆ ತಲುಪಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಜನರ ಸ್ಥಳಾಂತರ, ಅಪಾಯದ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಹಾಗೂ ರಕ್ಷಣಾ ತಂಡಗಳ ನಿಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮಂಗಳವಾರ ಬೆಳಗಿನ ಜಾವ 2.30ರ ವೇಳೆಗೆ ಚಂಡಮಾರುತವು ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ಕೇಂದ್ರೀಕೃತವಾಗಿತ್ತು. ಹಿಂದಿನ ಆರು ಗಂಟೆಗಳಲ್ಲಿ ಗಂಟೆಗೆ ಸುಮಾರು 25 ಕಿ.ಮೀ. ವೇಗದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಿತ್ತು.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮಂಗಳವಾರ ಸಂಜೆಯವರೆಗೆ ಇದೇ ದಿಕ್ಕಿನಲ್ಲಿ ಚಲಿಸಲಿರುವ ಚಂಡಮಾರುತ ಬಳಿಕ ವಾಯವ್ಯ ದಿಕ್ಕಿಗೆ ತಿರುಗಿ ಆಂಧ್ರಪ್ರದೇಶದ ಕರಾವಳಿ ಹಾಗೂ ಯಾನಂ ಸಮೀಪ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
ಕೇಂದ್ರ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಸಭೆಯಲ್ಲಿ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ರೈಲ್ವೆ 53 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ರಾಜ್ಯದ ಸಿದ್ದತೆಗಳನ್ನು ಪರಿಶೀಲಿಸಿ, ಜನರಿಗೆ ಸಕಾಲದಲ್ಲಿ ಎಚ್ಚರಿಕೆ ನೀಡುವಂತೆ ಹಾಗೂ ಹಾನಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪರಿಣಾಮ ಎದುರಿಸಬಹುದಾದ ಪ್ರದೇಶಗಳಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಡಲತೀರಗಳನ್ನು ಮುಚ್ಚಲಾಗಿದ್ದು, ಮಂಗಳವಾರ ಮಧ್ಯಾಹ್ನದಿಂದ ಕರಾವಳಿ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲು ಸಿದ್ಧತೆ ನಡೆಸಲಾಗಿದೆ.
ಚೆನ್ನೈನಲ್ಲಿ ಅಲೆಗಳ ಅವಾಂತರ
ಮಂಗಳವಾರ ರಾತ್ರಿ ಚೆನ್ನೈನ ಪಕ್ಕದಲ್ಲಿರುವ ಎನ್ನೋರ್ ನಲ್ಲಿ ಹಠಾತ್ ಸಮುದ್ರ ಅಲೆಗಳು, ಸುರಕ್ಷತಾ ತಡೆಗೋಡೆಗಳನ್ನು ದಾಟಿ ರಭಸದಿಂದ ಅಪ್ಪಳಿಸುತ್ತಿವೆ. ಸಮುದ್ರ ಕಿನಾರೆಯ ವಸತಿ ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗುತ್ತಿರುವ ದೃಶ್ಯಗಳು ಮೇಲ್ನೋಟಕ್ಕೆ ಕಾಣಿಸಿಕೊಂಡಿರುವುದು ಆತಂಕದ ಸಂಗತಿಯಾಗಿದೆ. ಎನ್ನೋರ್ ಬೀಚ್ ನಲ್ಲಿ ಬಲವಾದ ಅಲೆಗಳು ಅಪ್ಪಳಿಸಿದ್ದು ಚೆನ್ನೈನ ಭಾರತಿಯಾರ್ ನಗರದ ಮುಖ್ಯ ರಸ್ತೆ ಪ್ರವಾಹ ಸದೃಶ್ಯವಾಗಿದೆ. ಈ ನೆರೆಯಲ್ಲಿ ಹಲವಾರು ರಸ್ತೆಬದಿ ನಿಲ್ಲಿಸಿದ್ದ ಬೈಕ್ಗಳು ಕೊಚ್ಚಿ ಹೋಗಿವೆ. ಅನೇಕ ಅಂಗಡಿ ಮುಂಗಟ್ಟುಗಳು ನಾಶವಾಗಿವೆ. ಈ ರಸ್ತೆಯಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆಯನ್ನು ಬಂದ್ ಮಾಡಿದ್ದಾರೆ. ರಾತ್ರಿ 11.30ರ ಸುಮಾರಿಗೆ ಎನ್ನೋರ್ ಬಳಿ ಸಮುದ್ರವು ಶಾಂತಗೊಂಡಿದ್ದು ಬಾಧಿತ ಪ್ರದೇಶಗಳಲ್ಲಿರುವ ಜನರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.