ಬೆಂಗಳೂರು : ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಇಂದಿನಿಂದ ನಂದಿನಿ ಹಾಲು ಹಾಗೂ ಮೊಸರಿನ ಮಾರಾಟ ದರ ಗಣನೀಯವಾಗಿ ಹೆಚ್ಚಳವಾಗಿದೆ. ರಾಜ್ಯ ಸರ್ಕಾರವು ಪ್ರತಿ ಲೀಟರ್ ಹಾಲಿನ ದರವನ್ನು ಹೆಚ್ಚಿಸಲು ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಎಲ್ಲಾ ಮಾದರಿಯ ಹಾಲು ಮತ್ತು ಮೊಸರಿನ ನೂತನ ಪರಿಷ್ಕೃತ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಂದಿನಿಂದಲೇ ಜಾರಿಗೆ ಬರಲಿದೆ.
ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಕಳೆದ 5 ದಶಕಗಳಿಂದ ‘ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ’ ಎಂಬ ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಲಕ್ಷಾಂತರ ಹೈನುಗಾರ ರೈತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಸುಮಾರು 8.9 ಲಕ್ಷ ರೈತರು ಪ್ರತಿದಿನ ಹಾಲನ್ನು ಸಹಕಾರ ಸಂಘಗಳಿಗೆ ಪೂರೈಸುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂ. ಪಾವತಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ವರ್ಷ ಸಕಾಲದಲ್ಲಿ ಉತ್ತಮ ಮಳೆಯಾಗದ ಕಾರಣ ನೀರು ಮತ್ತು ಮೇವು ಕೊರತೆ ಉಂಟಾಗಿದ್ದು, ಬರದ ಪರಿಸ್ಥಿತಿ ಎದುರಾಗಿದೆ. ಹಾಲು ಉತ್ಪಾದಕ ರೈತರು ಪಶುಗಳ ನಿರ್ವಹಣೆ, ಔಷಧೋಪಚಾರ ಮತ್ತು ಮೇವು ಪೂರೈಕೆಗೆ ಹೆಚ್ಚಿನ ವೆಚ್ಚವಾಗುತ್ತಿದ್ದು, ಹೈನುಗಾರಿಗೆ ಮುಂದುವರಿಸುವುದು ಕಷ್ಟಕರವಾಗುತ್ತಿದೆ. ಹೀಗಾಗಿ ತುರ್ತಾಗಿ ಹಾಲು ಖರೀದಿ ದರವನ್ನ ಪ್ರತಿ ಲೀಟರ್‌ಗೆ ಕನಿಷ್ಠ 10 ರಿಂದ 12 ರೂ. ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಹಾಲು ಉತ್ಪಾದಕ ರೈತರ ಹಿತಾಸಕ್ತಿಯನ್ನು ಪರಿಗಣಿಸಿ ಸೂಕ್ತ ಪ್ರೋತ್ಸಾಹ ನೀಡುವ ಹಾಗೂ ಹೈನುಗಾರಿಕೆ ಕ್ಷೇತ್ರವನ್ನು ಸುಸ್ಥಿರವಾಗಿ ಬೆಳೆಸುವ ಉದ್ದೇಶದಿಂದ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ‘ನಂದಿನಿ’ ಟೋನ್ಡ್ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂ. ನಂತೆ ದರ ಪರಿಷ್ಕರಣೆಗೆ ಮತ್ತು ಪರಿಷ್ಕರಣೆಯಾದ ಮೊತ್ತದಲ್ಲಿ 7 ರೂ. ಹಾಲು ಉತ್ಪಾದಕರಿಗೆ ವರ್ಗಾಹಿಸುವಂತೆ ಕೆಎಂಎಫ್ ನಿರ್ದೇಶಿಸಿದೆ.
ಪರಿಷ್ಕೃತ ನಂದಿನಿ ಉತ್ಪನ್ನಗಳ ದರಗಳು
ಪರಿಷ್ಕೃತ ನಂದಿನಿ ಉತ್ಪನ್ನಗಳ ದರಗಳು
ಉತ್ಪನ್ನ ಹಳೆಯ ದರ ಹೊಸ ದರ
ಟೋನ್ಡ್ ಹಾಲು (1 ಲೀ.) ₹46 ₹54
ಹೋಮೊಜಿನೈಸ್ಡ್ ಟೋನ್ಡ್ ಹಾಲು (1 ಲೀ.) ₹47 ₹56
ಹೋಮೊಜಿನೈಸ್ಡ್ ಹಸುವಿನ ಹಾಲು (1 ಲೀ.) ₹50 ₹58
ಸ್ಪೆಷಲ್ ಟೋನ್ಡ್ ಹಾಲು (1 ಲೀ.) ₹52 ₹64
ಶುಭಂ ಹಾಲು (1 ಲೀ.) ₹52 ₹64
ಹೋಮೊಜಿನೈಸ್ಡ್ ಶುಭಂ ಹಾಲು (1 ಲೀ.) ₹53 ₹65
ಮೊಸರು (500 ಗ್ರಾಂ) ₹28 ₹34
ಮೊಸರು (1 ಕೆಜಿ) ₹54 ₹68