ರೈತರ ಹೋರಾಟಕ್ಕೆ ದೊಡ್ಡ ಗೆಲುವು: ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ!

ರಾಜ್ಯ

RAGHAVENDRA H A

7/15/20251 min read

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೆಐಎಡಿಬಿಯಿಂದ 13 ಗ್ರಾಮಗಳಲ್ಲಿ 1,777 ಎಕರೆ ಭೂ ಸ್ವಾಧೀನ ವಿರೋಧಿಸಿ ರೈತರು ಸುಮಾರು 1,200ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿದೆ.

ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನರಾಯಪಟ್ಟಣ ಸುತ್ತಮುತ್ತಲಿನ 13 ಗ್ರಾಮಗಳ ಭೂ ಸ್ವಾಧೀನಕ್ಕೆ ಕೆಐಎಡಿಬಿಗೆ ಭೂಮಿ ನೀಡಲು ರೈತರು, ಸಂಘಟನೆಗಳು ಒಪ್ಪುತ್ತಿಲ್ಲ. ರಾಜ್ಯ ಸರ್ಕಾರ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

1,777 ಎಕರೆ ಡಿನೋಟಿಫಿಕೇಷನ್ ಕೈಬಿಟ್ಟಿದ್ದೇವೆ. ಆದರೆ, ಭೂಮಾಲೀಕರು ಸ್ವಯಂ ಪ್ರೇರಿತರಾಗಿ ಭೂಮಿ ನೀಡಲು ಮುಂದಾದರೆ ಖರೀದಿಸುತ್ತೇವೆ. ಬಲವಂತವಾಗಿ ಖರೀದಿಸುವುದಿಲ್ಲ .ಸ್ವಯಂ ಪ್ರೇರಿತರಾಗಿ ಭೂಮಿ ನೀಡುವವರಿಗೆ ಸೂಕ್ತ ಪರಿಹಾರ ನೀಡುತ್ತೇವೆ. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು ಎಂಬುದು ನಮ್ಮ ಆಶಯವಾಗಿದೆ. ಸರ್ಕಾರದ ನಿರ್ಧಾರ ದೇವನಹಳ್ಳಿ ಪ್ರದೇಶಕ್ಕೆ ಮಾತ್ರ ಸಿಮೀತವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬಳಿಕ ಮಾತನಾಡಿದ ನಟ ಪ್ರಕಾಶ್ ರಾಜ್, ಇದು ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ರೈತರ ಜೊತೆಗೆ ಚರ್ಚಿಸಿದ ಬಳಿಕ ಸಿಎಂ ನಿರ್ಧಾರ ಪ್ರಕಟಿಸಿದ್ದಾರೆ.ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.

ಸಚಿವರಾದ ಎಂಬಿ ಪಾಟೀಲ್, ಕೆ. ಎಚ್, ಮುನಿಯಪ್ಪ, ರೈತ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಟ ಪ್ರಕಾಶ್ ರಾಜ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK

https://x.com/CMofKarnataka/status/1945023018994176051