ಮಹದೇವಪುರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ನಾಡ ಪ್ರಭು ಕೆಂಪೇಗೌಡರ ಅದ್ದೂರಿ 516 ನೇ ಜಯಂತೋತ್ಸವ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

7/2/20251 min read

ಮಹದೇವಪುರ : ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಹಾಕಿಕೊಟ್ಟ ಅಡಿಪಾಯದಿಂದ ಬೆಂಗಳೂರು ವಿಶ್ವದಲ್ಲೇ ಹೆಸರು ಪಡೆದು ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಮಹದೇವಪುರ ಕ್ಷೇತ್ರದ ಹೂಡಿ ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ಕ್ರೀಡಾಂಗಣದಲ್ಲಿ ಶಿರಾ ತಾಲ್ಲೂಕಿನ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಡೆದ ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡ ಅವರ 516 ನೇ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.

ನಾವು ಸ್ಮರಣೆ ಮಾಡುವ ನಾಯಕರು ಒಂದು ಜಾತಿಗೆ ಸೀಮಿರಲ್ಲ, ಜಾತಿ ಜಾತಿ ಎಂದು ಒಡೆದಾಡಬೇಡಿ ಎಂದ ಬಸವಣ್ಣನವರ ಜೊತೆ ನಮ್ಮ ಕೆಂಪೇಗೌಡರು ಇದ್ದಾರೆ. ಬೆಂಗಳೂರಿನಲ್ಲಿ ಎಲ್ಲಾ ಜಾತಿಯವರು ವಾಸಿಸುವಂತೆ ಮಾಡಿದ್ದಾರೆ, ಅಭಿವೃದ್ಧಿ, ಶಿಕ್ಷಣ, ಹೋರಾಟ, ಪ್ರಾಮಾಣಿಕತೆಯಿಂದ ಬೆಂಗಳೂರು ವಿಶ್ವದಲ್ಲೆ ಅಭಿವೃದ್ಧಿ ಹೊಂದಲು‌ ಸಾಧ್ಯವಾಯಿತು ಎಂದರು. ಅವರ ದೂರದೃಷ್ಟಿ ಇಂದಿನ ನಮ್ಮೆರಿಗೂ ಆದರ್ಶ ಎಂದು ಹೇಳಿದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ. ಆಧುನಿಕ ಬೆಂಗಳೂರಿನ ನಿರ್ಮಾತೃ.ಬೆಂಗಳೂರಿನ ಆಡಳಿತ ಹೇಗಿರಬೇಕೆಂದು ಅರಿತು ವೃತ್ತಿ ಆಧಾರಿತವಾಗಿ ಅನೇಕ ಪೇಟೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ನಿರ್ಮಿಸಿದ್ದರು. ಅವರ ಆಡಳಿತ ನಮಗೆಲ್ಲರಿಗೂ ಮಾದರಿ ಎಂದು ತಿಳಿಸಿದರು.

ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ನಮ್ಮ ಬೆಂಗಳೂರಿನಲ್ಲಿ ಯಾವಾಗಲೂ ಅನುಕೂಲಕರ ವಾತಾವರಣ ಇರುತ್ತದೆ. ಇದಕ್ಕೆ ಮೂಲ ಕಾರಣ ದೂರದೃಷ್ಟಿ ಇಟ್ಟುಕೊಂಡು ನಾಡಪ್ರಭು ಶ್ರೀ ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿದ್ದು. ಅಂದು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗೋಪುರವನ್ನು ಕಟ್ಟಿ ನಗರವನ್ನು ಕಟ್ಟಿದ್ದರು. ಎಲ್ಲಾ ಸಮಾಜದವರಿಗೂ ಹಾಗೂ ವ್ಯಾಪಾರದ ದೃಷ್ಟಿಯಿಂದ ಎಲ್ಲಾ ಪೇಟೆಗಳನ್ನು ನಿರ್ಮಿಸಿದ್ದರು, ಉತ್ತಮ ಪರಿಸರ ಹಾಗೂ ಜನ ಜೀವನಕ್ಕಾಗಿ ಅಂದಿನ ಕಾಲದಲ್ಲಿಯೆ ಕೆರೆಗಳನ್ನು ಅಭಿವೃದ್ಧಿಪಡೆಸಿದವರು. ಆದರೆ ಇಂದು ಆ ಗಡಿಯನ್ನು ಮೀರಿ ನಗರ ಬೆಳೆದಿದೆ. ನಗರದ ಹಲವಾರು ಕೆರೆಗಳನ್ನು ಮುಚ್ಚಲಾಗಿದೆ. ಈಗ ಮಳೆ ಬಂದರೆ ನಗರದಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಈಗಿನ ಕೆಲವರ ಆಡಳಿತದಿಂದ ಜನ ಬೇಸತ್ತಿದ್ದಾರೆ, ಮಳೆ ಬಂದು ಸಮಸ್ಯೆಯಾದಾಗ ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಳೆಯಿಂದಾಗುವ ಸಮಸ್ಯೆಗಳ ಪರಿಹಾರಕ್ಕೆ ಅಭಿವೃದ್ಧಿ ಪಡಿಸುಲು ಅನುದಾನ ಬಿಡುಗಡೆಮಾಡುವುದಾಗಿ ತಿಳಿಸಿ, ಈ ನಗರದಲ್ಲಿ ಹೊಸದಾಗಿ ಅಂಡರ್ ಪಾಸ್ ಮಾಡುತ್ತೇವೆ ಎನ್ನುತ್ತಾರೆ, ಇದರಿಂದ ಮತ್ತೆ ಮಳೆ ಬಂದರೆ ಅಂಡರ್ ಪಾಸ್ ಗಳು ಮಳೆಗೆ ಮುಳುಗುವಂತ ಪರಿಸ್ಥಿತಿ ಇದೆ, ಮೊದಲು ನಗರವನ್ನು ಅಭಿವೃದ್ಧಿ ಪಡಿಸಲಿ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ನಂಜಾವದೂತ ಮಹಾಸ್ವಾಮಿಗಳಿಂದ ಆಶೀರ್ವಚನೆ ಕಾರ್ಯ ನಡೆಯಿತು

ಎಸ್.ಎಸ್.ಎಲ್‌.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಮಹದೇವಪುರ ವಿಧಾನಸಭಾ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಸಾಧಕರನ್ನು ಗುರುತಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಎಸ್. ಪಿಳ್ಳಪ್ಪ, ನಗರ ಮಂಡಲ ಅಧ್ಯಕ್ಷ ಎನ್.ಆರ್. ಶ್ರೀಧರ್ ರೆಡ್ಡಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್,ಮುಖಂಡರಾದ ಬೊಮ್ಮನಹಳ್ಳಿ ಮುನಿರಾಜು,ಕೆಂಪೇಗೌಡ, ಗಣೇಶ್, ಕೆ.ವಿ.ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.