ವಿದ್ಯುತ್ ದುರಂತದಲ್ಲಿ ತೀವ್ರ ಮೆದುಳು ಗಾಯಗೊಂಡ ಯುವಕನಿಗೆ ಹೊಸ ಜೀವ ನೀಡಿದ ಮೆಡಿಕವರ್ ಆಸ್ಪತ್ರೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

9/9/20251 min read

ಬೆಂಗಳೂರು, ವೈಟ್‌ಫೀಲ್ಡ್: ಮೂರು ತಿಂಗಳ ಹಿಂದೆ ಸಂಭವಿಸಿದ ಭೀಕರ ವಿದ್ಯುತ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡ 17 ವರ್ಷದ ಪಶ್ಚಿಮ ಬಂಗಾಳ ಮೂಲದ ಯುವಕನಿಗೆ, ಮೆದುಳಿಗೆ ಫಂಗಸ್ ಹಿಡಿದಷ್ಟು ಗಂಭೀರ ಸ್ಥಿತಿಯಲ್ಲಿದ್ದರೂ, ಮೆಡಿಕವರ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ದೀಪಕ್ ಅವರ ಶಸ್ತ್ರಚಿಕಿತ್ಸೆಯಿಂದ ಹೊಸ ಬದುಕು ದೊರೆತಿದೆ.

ಆಘಾತದ ಪರಿಣಾಮವಾಗಿ ಯುವಕನ ಬಲ ಪಾರಿಯೆಟಲ್ ಭಾಗದ ತ್ವಚೆ ಮತ್ತು ಮೂಳೆ ಸಂಪೂರ್ಣವಾಗಿ ಹಾನಿಯಾಗಿದ್ದು, ಮೆದುಳಿನ ಭಾಗವೇ ಹೊರಬಿದ್ದಂತಹ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೇ, ಆ ಭಾಗದಲ್ಲಿ ಸೋಂಕು ಹರಡಿದ ಪರಿಣಾಮ ಫಂಗಲ್ ಇನ್ಫೆಕ್ಷನ್ ಕೂಡ ಅಭಿವೃದ್ಧಿಯಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ಆರಂಭಿಕ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ನಂತರ ಯುವಕನನ್ನು ಬೆಂಗಳೂರಿನ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಗೆ ತರಲಾಗಿದ್ದು, ನ್ಯೂರೋ ಸರ್ಜನ್ ಡಾ. ದೀಪಕ್ ಅವರ ಸಲಹೆಯ ಮೇರೆಗೆ ತಕ್ಷಣವೇ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು.

ಆಗಮಿಸಿದಾಗ ಯುವಕನ ದೇಹದ ಎಡಭಾಗ ಸಂಪೂರ್ಣವಾಗಿ ದುರ್ಬಲವಾಗಿತ್ತು. ಡಾ. ದೀಪಕ್ ಅವರು ಮೆದುಳಿನ ಗಾಯದ ಭಾಗವನ್ನು ಕ್ಲೀನಿಂಗ್ ಮಾಡಿ, ಮೆದುಳಿನ ಮತ್ತು ಫ್ಲ್ಯಾಪ್ ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆ ನಡೆಸಲಾಯ್ತು. ಇದು ಅಪರೂಪದ ಹಾಗೂ ಅಪಾಯಕಾರಿಯಾದ ಶಸ್ತ್ರಚಿಕಿತ್ಸೆಯಾಗಿದ್ದು, ಅದನ್ನು ಯಶಸ್ವಿಯಾಗಿ ನೆರವೇರಿಸಿದರು.ಇಂದು ಯುವಕ ಸಂಪೂರ್ಣ ಗುಣಮುಖನಾಗಿ ತಾನು ಮನೆಗೆ ಮರಳಿದ್ದಾನೆ.

"ಇದು ಕೇವಲ ಶಸ್ತ್ರಚಿಕಿತ್ಸೆಯಲ್ಲ, ಜೀವದ ಮೇಲಿನ ವಿಜಯದ ಕಥೆಯಾಗಿದೆ. ಇಂತಹ ಪ್ರಕರಣಗಳು ನಮ್ಮ ಕರ್ತವ್ಯ ಮತ್ತು ಸಾಮರ್ಥ್ಯವನ್ನು ಸದಾ ನೆನಪಿಸುತ್ತವೆ," ಎಂದು ಡಾ. ದೀಪಕ್ ಸಂತಸ ವ್ಯಕ್ತಪಡಿಸಿದರು.