ಶಾಸಕ ಭೈರತಿ ಬಸವರಾಜ ಮೇಲಿನ ಆರೋಪ ನಿವಾರಣೆಗೆ ದೇವರ ಮೊರೆ ಹೋದ ಕ್ಷೇತ್ರದ ಕಾರ್ಯಕರ್ತರು.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

7/23/20251 min read

ಕೆಆರ್ ಪುರ: ಶಾಸಕ ಭೈರತಿ ಬಸವರಾಜ ಅವರ ಮೇಲಿನ ಆರೋಪಗಳೆಲ್ಲಾ ನಿವಾರಣೆಯಾಗಲೆಂದು ಕ್ಷೇತ್ರದ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದೇವರ ಮೊರೆ ಹೋಗಿದ್ದು ,ಕೆಆರ್ ಪುರ ಕಟ್ಟೆ ಶ್ರೀ ವಿನಾಯಕ ದೇವಾಲಯದಲ್ಲಿ ತೆಂಗಿನಕಾಯಿ ಒಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಶ್ರೀಕಾಂತ್ ಅವರು, ನಮ್ಮ ಶಾಸಕರ ಮೇಲಿನ ಆರೋಪಗಳು ಆದಷ್ಟು ಬೇಗ ನಿವಾರಣೆ ಆಗಲಿ ಎಂದು ನಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದೇವರಿಗೆ ವಿಷೇಶ ಪೂಜೆ ಮಾಡಿದ್ದೇವೆ. ನಮ್ಮ ಶಾಸಕರಿಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಶಾಸಕ ಭೈರತಿ ಬಸವರಾಜ ಅವರ ಏಳಿಗೆಯನ್ನು ಸಹಿಸದವರು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜನರಿಗೆ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಶಾಸಕರೆಂದರೆ ಎಷ್ಟೋ ಜನ ಹುಟ್ಟುಹಬ್ಬಕ್ಕೆ ಶುಭ ಕೋರುವುದಕ್ಕೆ ಬರ್ತಾರೆ.. ಹೋಗ್ತಾರೆ, ಅವರಿಗೆಲ್ಲ ನಿಮ್ಮ ಹಿನ್ನೆಲೆ ತಿಳಿಸಿ ಶುಭಕೋರಿ ಅಂತ ಹೇಳೋದಕ್ಕೆ ಆಗುತ್ತಾ? ದೇವಾಲಯಗಳಿಗೆ ಭೇಟಿ ಕೊಟ್ಟಾಗ ನಿಮ್ಮ ಭಾಗದವರೆ ಅಂತ ಫೋಟೋ ತೆಗೆಸಿಕೊಂಡರೆ ಅದರಲ್ಲಿ ಶಾಸಕರ ತಪ್ಪೇನು? ಈ ರೀತಿಯ ಅಪಪ್ರಚಾರ ಸರಿಯಲ್ಲ ಇದಕ್ಕೆಲ್ಲ ದೇವರೇ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಬಿ.ನಾರಾಯಣಪುರದಲ್ಲಿ ಎರಡು ಕೊಲೆ ಆಗಿದೆ ಅಂತ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಕೊಲೆ ಆಗಿದ್ದರೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಈ ರೀತಿಯ ಸುಳ್ಳು ಆರೋಪಗಳಿಂದ ಜನರು ದಿಕ್ಕು ತಪ್ಪುವುದಿಲ್ಲ ನಿಮಗೆ ಮುಂದಿನ ದಿನಗಳಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದು ಹೇಳಿದರು.