ಡ್ರಗ್ಸ್ ಮುಕ್ತ ರಾಮಮೂರ್ತಿನಗರ ಮ್ಯಾರಥಾನ್ ಗೆ ನಟಿ ಸಪ್ತಮಿಗೌಡ ಚಾಲನೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/15/20251 min read

ಕೆ.ಆರ್ ಪುರ: ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವ್ಯಸನದಿಂದ ಯುವಕರನ್ನು ಕಾಪಾಡುವ ಕಾರ್ಯವಾಗಬೇಕು ಎಂದು ನಟಿ ಸಪ್ತಮೀಗೌಡ ಹೇಳಿದರು.

ಕೆ.ಆರ್.ಪುರ ಸಮೀಪದ ಎನ್.ಆರ್.ಐ ಬಡಾವಣೆಯಲ್ಲಿ ಎಸ್.ಕೆ.ಎಫ್. ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ರಾಮಮೂರ್ತಿನಗರ ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡಿದರು‌. ಹದಿನೆಂಟು ವಯಸ್ಸಿನ ಒಳಗಿನವರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ತಳಮಟ್ಟದಿಂದ ತೊಡೆದುಹಾಕಲು ಜಾಗೃತಿ ಅವಶ್ಯವಾಗಿದೆ. ಯುವಕರನ್ನು ಮಾದಕ ವ್ಯಸನದಿಂದ ಕಾಪಾಡುವ ಉದ್ದೇಶದಿಂದ ಎಸ್‌.ಕೆ.ಎಫ್‌ ಫೌಂಡೇಶನ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಅತಿ ಹೆಚ್ಚು ಯುವಕರನ್ನು ಹೊಂದಿರುವ ಭಾರತದಲ್ಲಿ ಮಾದಕ ವ್ಯಸನದಂತಹ ಚಟಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಯುವ ಸಮೂಹವು ದೇಶ ಅಭಿವೃದ್ದಿ ಹೊಂದಲು ಸಹಕಾರಿಯಾಗುತ್ತದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಅರೋಗ್ಯವಂತ ಸಮಾಜ ಸೃಷ್ಟಿಸಬೇಕು ಎಂದು ಬೆಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ಹರಿಬಾಬು ಸಲಹೆ ನೀಡಿದರು.

ಎಸ್.ಕೆ.ಎಫ್ ಫೌಂಡೇಶನ್ ಅಧ್ಯಕ್ಷೆ ಶಾಂತಕೃಷ್ಣಮೂರ್ತಿ ಮಾತನಾಡಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದ್ದು, ನಮ್ಮ ದೇಶದ ಯುವ ಶಕ್ತಿಯನ್ನು ಮಾದಕ ವಸ್ತುಗಳಿಂದ ರಕ್ಷಣೆ ಮಾಡಲು ಈ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ಮ್ಯಾರಥಾನ್‌ನಲ್ಲಿ ರಾಮ ಮೂರ್ತಿನಗರದ ಸುತ್ತಮುತ್ತಲಿನ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಅಪಾರ್ಟ್ ಮೆಂಟ್ ನಿವಾಸಿಗಳು, ಪೋಲಿಸರು ಪಾಲ್ಗೊಂಡಿದ್ದರು.ಆರೋಹಣ ಫೌಂಡೇಶನ್ ಹಾಗೂ ಬೆಂಗಳೂರು ನಗರ ಪೊಲೀಸ್ ಇಲಾಖೆ ಸಹಕಾರದಿಂದ ಮ್ಯಾರಥಾನ್ ನಡೆಸಲಾಯಿತು.

ಈ ಸಂದರ್ಭದಲ್ಲಿ ಎಸ್‌.ಕೆ. ಎಫ್. ಫೌಂಡೇಶನ್‌ ಸಂಸ್ಥಾಪಕ ಕಲ್ಕೆರೆ ಕೃಷ್ಣಮೂರ್ತಿ, ಪರ್ವತ ರೋಹಣಿ, ಭಾಗ್ಯಶ್ರೀ, ಸಾವಂತ್, ಡಿಸಿಪಿ ಹರಿಬಾಬು, ಇನ್ಸ್ ಪೆಕ್ಟರ್ ಸತೀಶ್,ಅಂಬರೀಶ್,ಕೆಪಿಎಲ್ ಲಕ್ಷ್ಮಣ್, ಪೃಥ್ವಿ ಕೃಷ್ಣಮೂರ್ತಿ, ಸಂಪತ್ ಇದ್ದರು.