ತಮಿಳುನಾಡು ಚುನಾವಣೆಗೆ AIADMK-BJP ಮೈತ್ರಿ; ಅಮಿತ್ ಶಾ ಘೋಷಣೆ
ದೇಶ/ವಿದೇಶ


ತಮಿಳುನಾಡು: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ DMKಯನ್ನು ಅಧಿಕಾರದಿಂದ ಕೆಳಗಿಳಿಸಲು ತಮ್ಮ ಪಕ್ಷ AIADMK ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು BJP ಹಿರಿಯ ನಾಯಕ ಅಮಿತ್ ಶಾ ಅವರು ಶುಕ್ರವಾರ ಘೋಷಿಸಿದ್ದಾರೆ.
2026ರಲ್ಲಿ ತಮಿಳುನಾಡಿನಲ್ಲಿ NDA ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮಿತ್ ಶಾ, AIADMK ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು NDA ಮೈತ್ರಿಕೂಟದ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.
ಉಚ್ಚಾಟಿತ AIADMK ನಾಯಕರಾದ ಓ.ಪನ್ನೀರ್ಸೆಲ್ವಂ ಮತ್ತು AMMK ನಾಯಕ TTV ದಿನಕರನ್ ಅವರನ್ನು ಮೈತ್ರಿಕೂಟದಲ್ಲಿ ಸೇರಿಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, BJP, AIADMKಯ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ಈ ಮೈತ್ರಿಕೂಟವು ಪರಸ್ಪರ ಹಿತಾಸಕ್ತಿಯಿಂದ ಹುಟ್ಟಿಕೊಂಡಿದೆ ಮತ್ತು ಎರಡೂ ಪಕ್ಷಗಳು ಈ ಹಿಂದೆ ಒಟ್ಟಿಗೆ ಚುನಾವಣೆ ಎದುರಿಸಿದ್ದವು ಎಂದು ಅಮಿತ್ ಶಾ ನೆನಪಿಸಿಕೊಂಡರು.
ಪಳನಿಸ್ವಾಮಿ, ಹಿರಿಯ AIADMK ನಾಯಕರಾದ ಕೆಪಿ ಮುನುಸಾಮಿ ಮತ್ತು ಎಸ್‌ಪಿ ವೇಲುಮಣಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮತ್ತು ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನೈನಾರ್ ನಾಗೇಂದ್ರನ್ ಕೂಡ ಮೈತ್ರಿ ಘೋಷಣೆಯ ಸಮಯದಲ್ಲಿ ಉಪಸ್ಥಿತರಿದ್ದರು.