ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ‌ ಅಂಬೇಡ್ಕರ್ ಜಯಂತಿ ಆಚರಣೆ

ಸ್ಥಳೀಯ ಸುದ್ದಿ

RAGHAVENDRA H.A

4/14/20251 min read

ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ‌ ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಅವರು ಒಬ್ಬ ವಿಶ್ವಮಾನವ. ಶೋಷಣೆ ಮತ್ತು ತುಳಿತಕ್ಕೊಳಗಾದ ಎಲ್ಲ ಜನರ ದನಿಯಾಗಿದ್ದವರು. ತಮ್ಮ ಉದಾತ್ತ ಚಿಂತನೆಗಳ ಮೂಲಕ ಭಾರತವನ್ನು ಜಾತ್ಯತೀತ, ಸಮಾಜವಾದಿ ಗಣತಂತ್ರವಾಗಿ ರೂಪಿಸಿದರು. ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ನೀಡಿದವರು. ಅವರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು ಎಂದರು.

ಅಂಬೇಡ್ಕರ್ ವಿಚಾರಧಾರೆಯ ಕುರಿತು ಮಾತನಾಡಿದ ಆರ್.ಎಲ್.ಜೆ.ಐ.ಟಿ‌ ಪ್ರಾಧ್ಯಾಪಕ ಪ್ರೊ.ರವಿಕಿರಣ್ ಕೆ.ಆರ್, ಸಾವಿರಾರು ವರ್ಷಗಳಿಂದ ಮನುಷ್ಯನ ಮನಸ್ಸಿನ ಮೇಲೆ ನಡೆದ ನಿರಂತರ ದಬ್ಬಾಳಿಕೆಯನ್ನು ಮೆಟ್ಟಿನಿಂತು, ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸ್ವಾತಂತ್ರ್ಯವನ್ನು ಕಂಡುಕೊಂಡ ಭಗವಾನ್ ಬುದ್ಧನ ಮಾರ್ಗವನ್ನು ಮುಂದುವರೆಸಿಕೊಂಡು ಬಂದವರು ಅಂಬೇಡ್ಕರ್. ಹೀಗಾಗಿ ಅವರು ಆಧುನಿಕ ಬುದ್ಧ ಎನಿಸಿದ್ದಾರೆ. ಶ್ರೇಷ್ಠ ಜ್ಞಾನಿಯಾದ ಅವರು, ಮಾನವೀಯ‌ ನೆಲೆಯಲ್ಲಿ ದೇಶದ ಭವಿಷ್ಯವನ್ನು ಕಂಡಿದ್ದಾರೆ. ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಅನನ್ಯ ವ್ಯಕ್ತಿತ್ವವಾಗಿದ್ದಾರೆ ಎಂದರು.

ಸಮಾನತೆಯ ಆದರ್ಶಗಳಿಗೆ ಪೂರಕವಾಗಿ ಅವರು ಕೊಟ್ಟ ಮೌಲ್ಯಾಧಾರಿತ ಜೀವನ ಕ್ರಮ ಎಲ್ಲರಿಗೂ ಮಾದರಿ. ಇಂದು ಒಬ್ಬ ಶ್ರೇಷ್ಠ ಮಾನವತಾವಾದಿಯನ್ನು ನಿರ್ದಿಷ್ಟ ಪರಿಧಿಗೆ ಸೀಮಿತಗೊಳಿಸುವ ಹುನ್ನಾರಗಳು ನಡೆಯುತ್ತಿವೆ. ಮಹರ್ ಹೋರಾಟದಿಂದ ಹಿಂದೂ ಕೋಡ್ ಬಿಲ್ ನವರೆಗೆ ಅಂಬೇಡ್ಕರ್ ಅವರ ಆಲೋಚನಾಬದ್ದ ದನಿ ಈ ದೇಶದ ಪ್ರಜ್ಞಾಪೂರ್ವಕ ಪ್ರಗತಿಯ ದಿಕ್ಸೂಚಿಯಾಗಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಆರ್.ರಾಕೇಶ್, ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಕೆ.ಸಿ.ನಾಗರಾಜ್, ಖಜಾಂಚಿ ಎಸ್.ರವಿಕುಮಾರ್, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ನರಸಿಂಹರೆಡ್ಡಿ, ಎಂಜಿನಿಯರಿಂಗ್ ಕಾಲೇಜು ಎಇಇ ಐ.ಎಂ.ರಮೇಶ್ ಕುಮಾರ್, ವ್ಯವಸ್ಥಾಪಕ ಯತಿನ್.ಎಸ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.