ಬೆಂಗಳೂರು: 2 ಲಕ್ಷ ಮೌಲ್ಯದ 5 ಕೆ.ಜಿ. ಗಾಂಜಾ ವಶ,ಇಬ್ಬರನ್ನ ಬಂಧಿಸಿದ ಅಮೃತಹಳ್ಳಿ ಪೋಲಿಸರು.
ಜಿಲ್ಲಾ ಸುದ್ದಿಸ್ಥಳೀಯ ಸುದ್ದಿ


ಬೆಂಗಳೂರು: ಪಶ್ಚಿಮ ಬಂಗಾಳದ ಮರ್ಷಿದಾಬಾದ್ ನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಕೋಲ್ಕತಾ ಮೂಲದ ಇಬ್ಬರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ, 5 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.
ಮರ್ಷಿದಾಬಾದ್ ಮೂಲದ ಸಾಬುಲ್ ಬಾದ್‌ಶಾ (19) ಮತ್ತು ಆಶ್ರಫುಲ್ ಸರ್ದಾರ್ (25) ಬಂಧಿತರು. ಆರೋಪಿಗಳಿಂದ 2 ಲಕ್ಷ ಮೌಲ್ಯದ 5 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ಮರ್ಷಿದಾಬಾದ್‌ನಲ್ಲಿರುವ ತಮ್ಮ ಪರಿಚಿತ ವ್ಯಕ್ತಿಗಳಿಂದ ಆರೋಪಿಗಳು ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಅಕ್ರಮವಾಗಿ ಬೆಂಗಳೂರಿಗೆ ತಂದು, ನಂತರ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು.
ವೃತ್ತಿಯಲ್ಲಿ ಇಬ್ಬರೂ ಒಡಿಶಾದಲ್ಲಿ ಗುಜರಿ ಮಾಡುತ್ತಿದ್ದರು. ಆದರೆ, ಇದರಿಂದ ಹೆಚ್ಚಿನ ಲಾಭ ಬಾರದೇ ಇದ್ದ ಹಿನ್ನೆಲೆಯಲ್ಲಿ ಗಾಂಜಾ ಮಾರಾಟಕ್ಕೆ ಇಳಿದಿದ್ದರು. ಅಮೃತಹಳ್ಳಿ ಕೆರೆ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಇಬ್ಬರು ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಸುಳಿವಿನ ಆಧಾರದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ವಿಚಾರಣೆಗೆ ಒಳಪಡಿಸಿದಾಗ , ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಗಾಂಜಾ ಮಾರಾಟಕ್ಕೆ ಇಳಿದಿದ್ದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.