ರಾಜ್ಯದ 4 ಕುಮ್ಕಿ ಆನೆ ಪಡೆದ ಆಂಧ್ರ ಡಿಸಿಎಂ ಪವಾನ್ ಕಲ್ಯಾಣ್ : ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು: ಸಿಎಂ ಸಿದ್ದರಾಮಯ್ಯ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

5/21/20251 min read

ಬೆಂಗಳೂರು: ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿ, ಹಸ್ತಾಂತರ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಆಂಧ್ರಪ್ರದೇಶದ ಅರಣ್ಯ ಸಚಿವರಾದ ಪವನ್ ಕಲ್ಯಾಣ್ ಅವರು ಆಂಧ್ರ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.

ಆನೆಗಳನ್ನು ಹಸ್ತಾಂತರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3,695 ಆನೆಗಳು ನಮ್ಮಲ್ಲಿವೆ. ಮಾನವ – ಆನೆ ಸಂಘರ್ಷ ತಡೆಗಟ್ಟಲು ಅಕ್ಕಪಕ್ಕದ ರಾಜ್ಯಗಳ ಸಹಕಾರವೂ ಅಗತ್ಯ.ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಮ್ಮ ಭಾಷಣವನ್ನು ಕನ್ನಡದಲ್ಲೇ ಆರಂಭಿಸಿದ ಪವನ್ ಕಲ್ಯಾಣ್ ಅವರು, ಕುವೆಂಪು ಅವರ 'ಅಮೃತವಾಣಿ' ಕವಿತೆಯ ಅರಣ್ಯ ಹಾಡು ಹಾಡುವ ಮುನ್ನ..ಸಾಲುಗಳನ್ನು ವಾಚಿಸಿ ಸಭಿಕರ ಮನ ಗೆದ್ದರು. ನಾವು ಬೇರೆ ರಾಜಕೀಯ ಪಕ್ಷಗಳ ಗುಂಪುಗಳಿಗೆ ಸೇರಿದ್ದರೂ, ನಾವು ಮೊದಲು ಭಾರತೀಯರು ಎಂಬ ಚಿಂತನೆ ಹೊಂದಿರುವವರು. ನಮ್ಮ ಅರಣ್ಯ ಮತ್ತು ಪರಿಸರದ ಸಂರಕ್ಷಣೆಯಲ್ಲಿ ಸಹೋದರ ರಾಜ್ಯಗಳಾದ ನಾವು ಪಣ ತೊಟ್ಟಿದ್ದೇವೆ. ಎರಡೂ ರಾಜ್ಯಗಳ ಅರಣ್ಯ ಸುರಕ್ಷಿತವಾಗಿರಬೇಕು ಎಂದು ಪವನ್ ಕಲ್ಯಾಣ್‌ ತಿಳಿಸಿದರು.

ಪ್ರಕೃತಿ-ಕನ್ನಡಿ, ಎರಡೂ ಒಂದೇ. ಕನ್ನಡಿ ಇರುವ ರೂಪವನ್ನೇ ನಿಮಗೆ ತೋರಿಸುತ್ತದೆ. ನೀವು ಪ್ರಕೃತಿ ರಕ್ಷಿಸಿದರೆ, ಪ್ರಕೃತಿ ನಿಮ್ಮನ್ನು ರಕ್ಷಿಸುತ್ತದೆ.ಸಂಸ್ಕೃತದಲ್ಲಿ ವೃಕೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ನಾವು ಮರ ರಕ್ಷಿಸಿದರೆ ಮರ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ನಾವೆಲ್ಲರೂ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡೋಣ ಎಂದರು.

ದಸರಾ ಆನೆಗಳು ವೀರನಹೊಸಹಳ್ಳಿಯಿಂದ ಮೈಸೂರಿಗೆ ಬರುವಾಗ ಪೂಜೆ ಮಾಡಿ ಕಳಿಸುವ ರೀತಿಯಲ್ಲೇ ರಾಜ್ಯದಿಂದ ಆಂಧ್ರಕ್ಕೆ ನೀಡುತ್ತಿರುವ ಆನೆಗಳಿಗೂ ಪೂಜೆ ಸಲ್ಲಿಸಲಾಗಿದೆ. ಇದು ಆನೆಗಳ ಬಗ್ಗೆ ಕರ್ನಾಟಕ ರಾಜ್ಯಕ್ಕೆ ಇರುವ ಪ್ರೀತಿ, ವಾತ್ಸಲ್ಯದ ಪ್ರತೀಕ' ಎಂದು ಅವರು ಹೇಳಿದರು.

ಹಸ್ತಾಂತರಗೊಂಡ ಆನೆಗಳ ವಿವರ:

ಕೃಷ್ಣ(15 ವರ್ಷ), 2022 ರಲ್ಲಿ ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿಯಲಾಗಿತ್ತು

ಅಭಿಮನ್ಯು(14 ವರ್ಷ),2023 ರಲ್ಲಿ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾಗಿತ್ತು

ದೇವ(39 ವರ್ಷ), ಕುಶಾಲನಗರದಲ್ಲಿ 2019 ರಲ್ಲಿ ಸೆರೆ ಹಿಡಿಯಲಾಗಿತ್ತು.

ರಂಜನ್‌ (26 ವರ್ಷ), ದುಬಾರೆಯಲ್ಲೇ ಜನಿಸಿತ್ತು.